ನೀ ಇಲ್ಲದ ದಿನ. . .
ನಿನ್ನ ಕಾಣದ ದಿನ ಸೂರ್ಯ ಮಂಕಾದ
ಚಂದ್ರ ತನ್ನ ಪ್ರಭೆ ಕಳೆದುಕೊಂಡ
ಮಿನುಗುವ ನಕ್ಷತ್ರ ಮರೆಯಾದವು
ಗಾಳಿ ತನ್ನ ಚಲನೆ ಮರೆಯಿತು.
ನದಿಯು ತನ್ನ ಓಟ ನಿಲ್ಲಿಸಿತು.
ತಂಪನೀವ ಮರವು ಬೋಳಾಯಿತು.
ಎಲ್ಲಾ ಸಹಿಸಿಯೂ ಸುಮ್ಮನ್ನಿದ್ದ ಭೂಮಿ ಅದುರತೊಡಗಿತು.
ವಿರಹ ಜ್ವಾಲೆಯಿಂದ ನನ್ನ ದೇಹ ಜ್ವಲಿಸತೊಡಗಿತು.
ಮನಸು ಹೇಳತೊಡಗಿತು…..
ನೀ ಇಲ್ಲದೆ ನಾನಿಲ್ಲ, ನಂಗೆ ನೀನೆ ಎಲ್ಲಾ
ನೀ ಇಲ್ಲದೆ ನಾನಿರುವುದು ತರವಲ್ಲ.
ನೊಂದಿದೆ ಮನ ಬೇಸರದಿ ಇಂದು
ಭಾವನೆಗಳ ಹಿಮ್ಮೇಳದೊಂದಿಗೆ ಹೊರಟಿದೆ
ಭ್ರಮಾಲೋಕದಿಂದ ತನ್ನ ಅಸ್ತಿತ್ವವ ಹುಡುಕಿ
ಏನೊಂದು ಶಾಶ್ವತವಲ್ಲದ ಈ ಲೋಕದಲ್ಲಿ
ಮುಕ್ತಿ ಪಡೆಯುವುದು ಯಾವುದರಿಂದ, ಪಡೆದರೂ
ತೆರಳುವುದು ಎಲ್ಲಿಗೆ ಅಂತಾ ತಿಳಿಯದಿಲ್ಲಿ.
ನೀ ಹೇಳಿದ ಮಾತುಗಳು.. .. . ..
ನಾನಿಲ್ಲದಿರೆ ಏನು, ಈ ಲೋಕದಲ್ಲಿ
ನಿನ್ನ ನಿಲುವನ್ನು ಬದಲಿಸಿಕೊ ಮನದಲ್ಲಿ
ಪ್ರಕೃತಿಯ ಕಣಕಣದಲ್ಲೂ ಕಾಣುವೆ ನನ್ನ ಆಕೃತಿ
ಅದರಿಂದ ಸ್ಫೂರ್ತಿಯ ಪಡೆದು ರಚಿಸು ಹೊಸ ಕಲಾಕೃತಿ.
ಸುಂದರ ಸೃಷ್ಟಿಯ ಸೊಬಗನ್ನು ಸವಿ
ಆಗದಿರು ನೀ ವ್ಯರ್ಥ ಚಿಂತನೆಯ ಕವಿ
ನಿಶ್ಚಿತವಾಗಿಯೂ ನೀ ಗೆಲ್ಲುವ ಖಾತ್ರಿ ನನಗಿದೆ
ನನ್ನಾಸೆಯ ಕೈಗೂಡಿಸುವ ಶಕ್ತಿ ನಿನಗೆ ಮಾತ್ರ ಇದೆ.
ದಿನಾಂಕ:23-10-06