ಹೇಗೆ ಮರೆಯಲಿ ನಿನ್ನ ತನುಮನದಲ್ಲಿ ಒಂದಾಗಿ ಬೆರೆತಿರುವೆ ಚಿನ್ನ
ನನ್ನ ಬಾಳ ಕಥೆಗೆ ಮುನ್ನುಡಿಯ ಬರೆದ ನಿನ್ನ, ತೊರೆದು ಬದುಕಿದರೆ ಏನು ಚೆನ್ನ
ಭಾವನೆಗಳಿಗೆ ಬಣ್ಣ ಕಟ್ಟಿ ಪ್ರೀತಿಯ ರಂಗನ್ನು ಚೆಲ್ಲಿದೆ ನನ್ನ ಹೃದಯಕೆ
ಮನದಿ ನೂರು ಬಗೆಯ ಚಿತ್ತಾರದ ರಂಗವಲ್ಲಿಯ ಬಿಡಿಸಿದೆ
ಬಾಳ ಬಂಡಿಯ ಹೂಡುವುದ ಕಲಿಸಿ ನನಗೆ ಗುರುವಾದೆ
ಬದುಕ ಸಾಗಿಸುವ ರೀತಿಯ ಹೇಳಿಕೊಟ್ಟು ನೀನೇಕೆ ದೂರ ಹೋದೆ
ನಿನ್ನ ಬಯಕೆಯ ತೋಟದಿ ಬೆಳೆದು ಹೆಮ್ಮರವಾದೆ ನಾನು
ಬಳ್ಳಿಯಂತೆ ಬಳಸಿ ನನ್ನ ಸಾಧನೆಗೆ ದಾರಿಯಾದೆ ನೀನು
ಹಚ್ಚ ಹಸಿರಿನ ಸಿರಿಯ ತಂದೆ ನೀನು ನನ್ನ ಬಾಳಿಗೆ
ಆಸೆ ಬೀಜ ಬಿತ್ತಿ ಮಳೆಯ ಸುರಿಸಿ ಹಸಿರ ಮೂಡಿಸಿ ಬರವ ಏಕೆ ತಂದಿತ್ತೆ ಕೊನೆಗೆ
ಸಾಧ್ಯವಿಲ್ಲವಾಗಿದೆ ಕಳೆಯುವುದು ಒಂದು ಕ್ಷಣ ಕೂಡ ನಿನ್ನ ಬಿಟ್ಟು
ಕಾತರದಿ ಹಾತೊರೆಯುತ್ತಿರುವೆ(ಕಾದಿರುವೆ) ನನ್ನ ಮನದನ್ನೆ ಬೇಗ ಬಾ ಎಲ್ಲ ಬದಿಗಿಟ್ಟು
ಬಂದು ಬಿಡು ಗೆಳತಿ ನೀ ಬೀರಿದ ಪ್ರೀತಿಯ ಕಂಪು ಕರಗುವ ಮುನ್ನ
ಉಳಿಸು ಬಾ ವಿರಹದ ಬೆಂಕಿಯಿಂದ ನನ್ನ ಒಡಲಾಳವನ್ನ
ನಿಶ್ಚಿತವಾಯಿತು ನನಗೆ ಈ ದಿನ ನಾ ಬೇರೆಯಲ್ಲ ನೀ ಬೇರೆಯಲ್ಲ ನಮ್ಮದೊಂದೆ ಒಡಲು
ನಮ್ಮ ಪ್ರೀತಿಯೆಂಬ ಹೊಳೆಯು ಹರಿದು ಮೂಡಲಿ ಬಾಳ ಕಡಲು
ಹನಿ ಹನಿ ಮಕರಂದವು ಸೇರಿ ಆಗಲಿ ನಮ್ಮ ಬದುಕು ಜೇನುಗೂಡು
ಬೇಗ ಬಂದು ನನ್ನ ನಿನ್ನ ಬಯಕೆಯ ಬದುಕಿಗೆ ನಾಂದಿಹಾಡು
-ದಿನಾಂಕ: ೪/೫/೨೦೦೬, ಸಮಯ: ಬೆಳಗ್ಗೆ ೯:೨೯