ಸಂಜೆಗತ್ತಲಲ್ಲಿ ಮೂಡಿತು ಸುಳಿಮಿಂಚು, ನೀ ನನ್ನ ಬಾಳ ಇರುಳಿನಲ್ಲಿ ಸುಳಿದಂತೆ
ಮುಸಲ ವರ್ಷಧಾರೆಯು ಭೂರಮೆಯನ್ನು ತಂಪಾಗಿಸಿತು
ನೀ ನನ್ನ ರಮೆಯಾಗಿ ಹರುಷದ ಹೊಳೆ ಹರಿಸಿದಂತೆ
ಆಹೋರಾತ್ರಿ ಸುರಿದ ಮಳೆಯಿಂದ ನಳನಳಿಸುತ್ತಿತ್ತು ಪ್ರಕೃತಿ
ಮುಂಜಾನೆಯ ಮಂಜು ಮುಸುಕಿದ ಮನಸ್ಸಿನಲ್ಲಿ ಮೂಡಿತ್ತು ನಿನ್ನ ಆಕೃತಿ
ನೇಸರನ ಸುಡುಬಿಸಿಲಿನ ತಾಪಕ್ಕೆ ಬಳಲಿತ್ತು ತರುಲತೆ
ನೆರಳಿನಲ್ಲಿ ನಿಂತೂ ಸೂರ್ಯನ ಶಾಖದ ರುಚಿಯ ಕಂಡದ್ದು ನನ್ನ ವ್ಯಥೆ
ಸಂಜೆ ಮರುಕಳಿಸಿತು ಮಿಂಚು ಹರಿಯಿತು
ಮೋಡ ಚದುರಿತು ಮಳೆಯು ಇಳಿಯಿತು ಧರೆಯೊಳಗೆ
ದಿನ ಹೀಗೆ ಸಾಗಿತ್ತು ಪರಿಸರದ ದಿನಚರಿ
ಇಷ್ಟಾದರೂ ತಣ್ಣಗಾಗಲಿಲ್ಲ ಒಡಲ ಉರಿ
ಬೇಸರದ ಬದುಕಿನ ನಡುವೆ ಮಿಂಚಂತೆ ನೀ ಬಳಿ ಬಂದೆ
ನನ್ನೆಲ್ಲಾ ತಪ್ಪುನೆಪ್ಪುಗಳನ್ನು ಸರಿಪಡಿಸಿ ತೊರೆದೆ
(ಕಡೆಗೂ ಕೈಗೆಟುಕದೆ ಗಗನದಿ ಮಿಂಚಿ ಮರೆಯಾದೆ)
ಬಂದ ಹಾದಿಯ ಸುಳಿವು ಸಿಗದಂತೆ ಸುಳಿಮಿಂಚಂತೆ ಮರೆಯಾದೆ