ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾ
ಬೆಳಗಿನಿಂದ ನೋಡಿ ನೋಡಿ ಸಾಕಾಯ್ತು
ಅತ್ಲಿಂದ ಇತ್ಲಿಂದ ಮೋಡ ಚದುರೊಕ್ಕೆ ಶುರುವಾಯ್ತು
ಅಕ್ಕ ಪಕ್ಕದ ಮೋಡದ ಜೊತೆ ಗುದ್ದಾಟವಾಯ್ತು
ತಿಳಿ ನೀಲಿ ಆಗಸವು ಕಾಡಿಗೆಯಂತೆ ಕಪ್ಪಾಯ್ತು
ಆದ್ರೂ ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾ
ಕೆರೆ ನೀರನೆಲ್ಲಾ ಹೀರಾಯ್ತು, ನಿನ್ನ ಹೊಟ್ಟೆ ದೊಡ್ಡದಾಯ್ತು
ತಂಗಾಳಿ ಬೀಸಾಯ್ತು, ಬಿರುಗಾಳಿ ಬಂತು
ನಾಲ್ಕು ಹನಿ ಕಾಣ್ದೆ ದನಕರ ಬರಗಟ್ಟಿ ಹೊದ್ವು
ಆಗ್ಲಿಂದ ನೋಡುತ್ತಿವ್ನಿ ಆ ಮೋಡ ಮಳೆನಾ ಸುರುಸಕೇವಲ್ದು
ಹೌದು… ಇಲ್ಲಿ ಮಾತ್ರ ಹಿಂಗೇನಾ
ಅಥವಾ ಅಲ್ಲೂ ಹಂಗೇನಾ
ಅಂತಾ ಎಲ್ಲೆಡೆ ಕೇಳಾಯ್ತು
ಕತ್ತೆತ್ತಿ ನೋಡಿದೆ ಪಾಪಿ ಮೋಡ ತೇಲಾಡುತ್ತಿದೆ
ನಾನಿಲ್ಲಿ ಗಂಟಲು ಒಣಗಿಸಿಕೊಂಡು ಕುಂತಿದ್ದರೆ
ಮೋಡದ ಕುಣಿತ ಜೋರಾಯ್ತು, ನನ್ನ ಕಣ್ಣು ಮಸುಕಾಯ್ತು
ಗಂಟೆ ಇಷ್ಟಾಯ್ತೊ ಗೊತ್ತಿಲ್ಲ, ನಂಗೆ ಒಂದೂ ನೆಪ್ಪಿಲ್ಲ
ಆದ್ರೆ ನಾನು ನೀರಲ್ಲಿ ತೇಲುತ್ತಿರೊ ಹಾಂಗಾನಿಸಿತು
ಮಿಂಚು ಹೊಡೆಯಿತು, ಗುಡುಗು ಕೇಳಿತು
ದಿಗಿಲಾಗಿ ಕಣ್ ಬಿಟ್ಟಾಗ ತಿಳಿತು
ಮಿಂಚದು ಮಿಂಚಲ್ಲ ಅಪ್ಪಯ್ಯನ ಹೊಡೆತ
ಗುಡುಗದು ಗುಡುಗಲ್ಲ ಅಮ್ಮನ ಕೊರೆತ
ಕಿಟಕಿ ಇಂದ ಇಣುಕಿ ನೋಡಿದೆ ಗೊತ್ತಾಯ್ತು
ಇದುವರೆಗೂ ನಾನು ಕಂಡಿದ್ದು ಕನಸು
ಆದರೂ ಕೇಳತೊಡಗಿತು ಮನಸ್ಸು
‘ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾ’