ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ. ಶಿಶಿರ
ತಿಳಿಯಾದ ಮನಸ್ಸಿಗೆ ಭಾವನೆಯ ಬಣ್ಣ ಕಟ್ಟುವುದೇ ಸವಿಗನಸು
ನೊಂದ ಮನಸ್ಸಿಗೆ ಹಿತವ ನೀಡುವುದೇ ಸವಿಗನಸು
ನಾ ಕಂಡೆ ಸವಿಗನಸೊಂದನ್ನ ನನ್ನ ಮನದನ್ನೆ ಇದ್ದಳು ಜೊತೆಗೆ
ಏಕಾಂತದಿ ವಿಹರಿಸಿದೆವು ನಾವು ಹೊಸ ಲೋಕದೊಳಗೆ
ಸವಿದೆವು ನಿಸರ್ಗದ ಚೆಲುವಿನ ಮಕರಂದವ, ದುಂಬಿಗಳಾಗಿ,
ದೂರದ ವಿಶಾಲ ಗಗನದಲ್ಲಿ ಹಾರಿದೆವು ಹಕ್ಕಿಗಳಾಗಿ
ಸಾಗರದೊಳಗೆ ಧುಮುಕಿದೆವು ಮೀನುಗಳಾಗಿ
ಮಳೆಯ ಸೂಚನೆ ಕಂಡು ನರ್ತಿಸಿದೆವು ನವಿಲುಗಳಾಗಿ,
ವಸಂತನ ಚೆಲುವಿಗೆ ಮರುಳಾಗಿ ಮಾರುಹೋದೆವು.
ಮನದ ಯಾವ ಮೂಲೆಯಲ್ಲಿ ಅಡಗಿತ್ತೋ ಅಶಾಂತಿ
ಧುತ್ತೆಂದು ಹೊರ ಬಿತ್ತು. ರಸ ನಿಮಿಷಗಳು ರಸಹೀನವಾಯಿತು
ಬದಲಾವಣೆಯ ಅರಿವೇ ಇಲ್ಲದ ನಮಗೆ ಗಾಭರಿಯಾಯಿತು
(ಬದಲಾವಣೆಯಿಂದ ಕಳೆದೊಯ್ತು ನಮ್ಮಕಾಂತಿ)
ಗ್ರೀಷ್ಮದ ಸುಡು ಬಿಸಿಲಿನಂತ ವಿರಹವು ಮೊದಲಾಯಿತು
ದೂರದೂರಿಗೆ ಹೋದ ನಲ್ಲೆಯ ನೆನೆಯುತ್ತಿತ್ತು ನನ್ನ ಮನ
ನಾನಿದ್ದ ಕಾನನದ ಪರಿಸರ ಮೊದಲಿಗಿಂತ ಆಗಿತ್ತು ಇನ್ನಷ್ಟು ಮೌನ
ಹೊರಗೆ ಸುರಿವ ಮಳೆಯಲ್ಲಿ ನಿಂತು ಹೇಳುತ್ತಿತ್ತು ನನ್ನ ಮನ
ಬಾರದಿರಲಿ ಯಾರಿಗೂ ಈ ನರಕ ಯಾತನ
ಏಕಾಂತದ ಹೊಸ ಅನುಭವದಿ ಜಗವ ಕಂಡೆ
ಕಾಲ ಎಲ್ಲವನು ಮರೆಸುತ್ತದೆ ಎಂಬಂತೆ ಕೆಲಕಾಲ ಅವಳ ಮರೆತೆ
ನನ್ನ ಸ್ವಶಕ್ತಿಯಿಂದ ಎಲ್ಲವ ಪಡೆದುಕೊಂಡೆ.
ಋತು ಬದಲಾಯಿತು ಎಲ್ಲರೊಡನೆ ಕಲೆತೆ, ಬೆರೆತೆ.
ಪುಳಕವಾಗಿತ್ತು ನನ್ನ ಮನ ಹಾಡುತ್ತಿತ್ತು ಹೇಮಂತಗಾನವ
ಒಂದೆರಡು ಭಾರಿ ಸಂಧಿಸಿದೆ ಅವಳನ್ನು ಸವಿಗನಸಿನೊಂದಿಗೆ
ಬದಲಾಗಿರಲಿಲ್ಲ ಅವಳು ನಂಬಲಾಗಲಿಲ್ಲ ನನಗೆ
ಶಿಶಿರದಿ ಉದುರುವ ಎಲೆಯಂತೆ ಕಿತ್ತೊಯ್ದೆ ಮನದಿಂದ ಕೋಪವ