ಬೆಳಕಿನ ಸುಳಿ ತರುವುದು ಈ ದೀಪಾವಳಿ
ಮನೆಯ ಸುತ್ತಾ ಮೂಡಿಸಿದೆ ಪ್ರಭಾವಳಿ
ನಿನ್ನ ಕಣ್ಗಳ ಕಾಂತಿಯಿಂದ ಮನೆಯ ಬೆಳಗಿದೆ
ಅಂಧಕಾರದಿ ತುಂಬಿದ್ದ ನನ್ನ ಮನಕ್ಕೆ ನೀ ಜ್ಯೋತಿಯಾದೆ
ಹರುಷದ ಹೊನಲು ಹರಿದಿದೆ ಇಂದು
ಮುದದಿ ನಲಿಯುತಿಹರು ಚಿಣ್ಣರು ನಿನ್ನ ಹಿಂದು-ಮುಂದು
ಬೆಳಕಿನ ಹಬ್ಬವ ಸ್ವಾಗತಿಸುವ ಪರಿಯ ನಾ ಅರಿಯೆ
ತಾಮಸ ಜಗದಿ ಬಂಧಿತನಾಗಿದ್ದ ನಾ ಮರೆಯೆ
ನೀ ತಂದೆ ನನ್ನ ಬಾಳಿಗೆ ಬೆಳಕಿನ ಸಿರಿ
ದೀಪವ ಬೆಳಗಿದೆ ನನ್ನ ಕತ್ತಲ ಬದುಕಿಗೆ
ದೀಪದಿಂದ ದೀಪವ ಹಚ್ಚಿ ಬೆಳಕ ಹರಿಸಿದೆ
ಮನದ ದುಗುಡವ ಮರೆಯಲು ಸರಿ ಹಬ್ಬವ ಆರಿಸಿದೆ.
ಆಗಸದಿ ತಾರೆಗಳು ಮಂಕಾಗಿದೆ, ಪಟಾಕಿಯ ಬೆಳಕಿಗೆ
ಸಿಹಿತಿನಿಸಿನ ರಸದೌತಣವ ನೀಡಿದೆ ಎಲ್ಲರ ಉದರಕೆ
ಹೊಸ ದಿರಿಸು ಧರಿಸಿ ಕಣ್ಮನ ಸೆಳೆಯುತ್ತಿದ್ದಾರೆ ಬಾಲೆಯರು
ಹಿಡಿದು ಬೊಗಸೆ ತುಂಬ ದೀಪ ಕತ್ತಲೆಯ ನೀಗಿಸಲು ನಿಂತಿಹರು
ದೀಪಾವಳಿಯೆಂದರೆ ಚಿಣ್ಣರಿಗೆ ಪಟಾಕಿ, ಮತಾಪಿನ ನೆನಪು
(ನನಗೆ ನೆನಪಿರುವುದು ಮಾತ್ರ ನನ್ನಾಕೆಯ ಸಂಭ್ರಮದ ಒನಪು)
ಆದರೆ ನನ್ನ ಬಾಳಲ್ಲಿ ಹಸಿರಾಗಿದೆ ಸದಾ ಹೊಸ ಹೊಳಪು