ವಿಜಯ ಕರ್ನಾಟಕ ನೆಕ್ಸ್ಟ್ ನಲ್ಲಿ ಪ್ರಕಟಿತ ಕಥೆಯ ಪೂರ್ಣ ಭಾಗ ಇಲ್ಲಿದೆ
ಅವಳ ಕಾಯಿಲೆಗೆ ಮಾಲಿನ್ಯವೇ ಮದ್ದು ಎಂದು ತಿಳಿಯಲು ಅವನಿಗೆ ಯಾವುದೇ ಗ್ರಂಥದ ಅಗತ್ಯ ಬೀಳಲಿಲ್ಲ. ತನ್ನ ಸಂಗಾತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ತನ್ನ ದೇಶದ ಭವಿಷ್ಯ ನಿರ್ಧರಿಸುವ ಹಾದಿಯನ್ನು ತುಳಿಯುವವನಿದ್ದ. ಅವನು ಸೈಂಟಿಸ್ಟ್ ಅವಿನಾಶ್.
ಸಿಂಗಪುರದಿಂದ ಗೆಳತಿ ರಚಿತಾಳನ್ನು ಕರೆದುಕೊಂಡು ಬೆಂಗಳೂರಿನ ಹೊರವಲಯಕ್ಕೆ ಬಂದಿದ್ದ. ಮಾಲಿನ್ಯಯುಕ್ತ ಪರಿಸರ ಕೆಲ ದಿನಗಳು ಆಕೆ ಉಳಿದರೆ ಮಾತ್ರ ಉಸಿರಾಟ ಸರಾಗವಾಗಲು ಸಾಧ್ಯವಿಲ್ಲ. ಸ್ವತಃ ಸಂಶೋಧಕಿಯಾದ ರಚಿತಾಳಿಗೆ ಆಮ್ಲಜನಕ ಅಗತ್ಯಕ್ಕಿಂತ ಹೆಚ್ಚು ಉತ್ಪತ್ತಿಯಾಗುತ್ತಿತ್ತು. ಹೌದು, ಇವರಿಬ್ಬರ ಸಂಶೋಧನೆ ವಸ್ತು ಕೂಡಾ ಅದೇ. ಆಮ್ಲಜನಕ.
ಇಂಡೋನೇಷಿಯಾ, ಸುಮಾತ್ರದಲ್ಲಿ ಹೆಕ್ಟೇರುಗಟ್ಟಲೇ ತಾಳೆ ಮರಗಳ ಕಾಡು ಸುಟ್ಟಿದ್ದರಿಂದ ಸಿಂಗಪುರದ ಮಾಲಿನ್ಯ ನಗರಿ ಎಂಬ ಟ್ಯಾಗ್ ಹೊತ್ತುಕೊಳ್ಳಬೇಕಾಗಿ ಬಂದಿತ್ತು. ಅದು ಕಳೆದ ಆರು ವರ್ಷದಲ್ಲಿ ಮೂರು ಬಾರಿ, ಎಂಎನ್ಸಿಗಳ ಹಣದಾಹಕ್ಕೆ, ಕಾಗದ ಉತ್ಪಾದನೆಗೆ ಮತ್ತೊಂದಕ್ಕಾಗಿ ಬೆಳೆಯಲ್ಪಡುವ ಈ ಕಾಡಿಗೆ ಬೆಂಕಿ ಹಾಕಿದರೆ ಅದರಿಂದ ಹಬ್ಬಿರುವ ಇಂಗಾಲದ ಗಾಳಿ ಸಿಂಗಪುರದ ಪರಿಸರವನ್ನು ನಾಶ ಮಾಡುತ್ತದೆ. ಸಿಂಗಪುರದಲ್ಲಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದಕ್ಕೆ ಪರಿಹಾರವಾಗಿ ಡಾ. ಅವಿನಾಶ್ ಹಾಗೂ ರಚಿತಾ ಸಂಶೋಧಿಸಿದ್ದ ಆಮ್ಲಜನಕದ ಭಸ್ಮರೂಪ ಈಗ ಸಾಗರ ದಾಟಿ ಬೆಂಗಳೂರು ಸೇರಿತ್ತು.
ಈ ಅಮೂಲ್ಯ ವಸ್ತುವಿನ ಬಗ್ಗೆ ತಿಳಿದಿದ್ದು ಕೆಲವರಿಗೆ ಮಾತ್ರ, ಇದರ ಬಳಕೆ ಕೂಡಾ ಸುಲಭ. ಭಾರತದಲ್ಲಿ ಕೆಲ ಪಂಗಂಡಗಳಲ್ಲಿ ಯಾರಾದರೂ ಸತ್ತ ಮೇಲೆ ಶ್ರಾದ್ಧ ಮಾಡಿ, ಅವರ ಅಸ್ಥಿಯನ್ನು(ಮಾನವ ದೇಹದ ಮುಖ್ಯವಾಗಿ ಮುರ್ನಾಲ್ಕು ಮೂಳೆಗಳ ಭಸ್ಮ) ಪಂಚಭೂತಗಳಿಗೆ ಸೇರಿಸುವುದು ವಾಡಿಕೆ. ಇದೇ ಮಾದರಿಯಲ್ಲಿ ಅವಿನಾಶ್ ಸಂಶೋಧನೆಯ ಫಲ (ಆಮ್ಲಜನಕದ ಹೊಸ ರೂಪ) ಕೂಡಾ ನೀರು, ಅಗ್ನಿ, ವಾಯು, ಭೂಮಿ, ಆಕಾಶಕ್ಕೆ ಅಗತ್ಯ ಪ್ರಮಾಣದಲ್ಲಿ ಸೇರಿಸಿದರೆ ಮಾಲಿನ್ಯ ಮುಕ್ತ ವಾತಾವರಣ ಸೃಷ್ಟಿ ಸಾಧ್ಯವಿತ್ತು. ಈ ಬಗ್ಗೆ ತಿಳಿದ ಸಿಂಗಪುರದ ಸರ್ಕಾರ ಅವಿನಾಶ್ ಬೆನ್ನ ಹಿಂದೆ ಬೀಳುವುದು ಖಾತ್ರಿಯಾಗಿತ್ತು. ತನ್ನ ರಿಸರ್ಚ್ ಬಗ್ಗೆ ಈಗಾಗಲೇ ಟಿಇಡಿ ಟಾಕ್ ನಲ್ಲಿ ಸುಳಿವು ನೀಡಿದ್ದ.
ರಾತ್ರಿ ವೇಳೆ ಕೂಡಾ ದ್ಯುತಿಸಂಶ್ಲೇಷಣಾ ಕ್ರಿಯೆ ಮೂಲಕ ಬೆಳಕನ್ನು ಬಳಸಿ ನೀರನ್ನು (ಎಚ್ ೨೦) ಒಡೆದು ಆಮ್ಲಜನಕ ಉತ್ಪತ್ತಿ ಮಾಡುವ ಕ್ರಿಯೆಯನ್ನು ಕಂಡು ಹಿಡಿದಿದ್ದ. ಸಿಂಗಪುರದ ಪೊಲೀಸರು ಬೆಂಗಳೂರಿಗೆ ಬರುವಷ್ಟರಲ್ಲಿ ಅವಿನಾಶ್ ಹಾಗೂ ರಚಿತಾ ಯಲ್ಲಾಪುರದ ಕಾಡಿನೊಳಗೆ ಸೇರಿದ್ದರು. ಮುಂದಿನ ಪ್ರಕ್ರಿಯೆಯಲ್ಲಿ ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯಲು ಸಾಧ್ಯವಿಲ್ಲ. ಪಂಚಭೂತಗಳಲ್ಲಿ ಸಂಶೋಧನೆಯ ಫಲ ಸೇರಿಸುವುದು ಸಾವಿಗೆ ಆಹ್ವಾನ ನೀಡಿದಂತೆ. ಆದರೆ, ನಾವಿಬ್ಬರು ಮಾತ್ರ ಉಳಿಯುವುದರಿಂದ ಪ್ರಯೋಜನವಾದರೂ ಏನು, ನಮ್ಮ ನಾಡು ಉಳಿಯಬೇಕು ಎಂದು ನಿರ್ಧರಿಸಿ, ಪರಿಸರದ ಆಮ್ಲಜನಕ ಪ್ರಮಾಣ ಹೆಚ್ಚಿಸುತ್ತಾ ಬಂದರು.
ಕಾಳಿ ನದಿ, ಜೋಯ್ಡಾ ಅರಣ್ಯದ ಕಾಡ್ಗಿಚ್ಚು, ಸೂಪಾ, ಹೊನ್ನಾವರದ ಗಾಳಿ, ಕಡಲು, ಕಾಡು, ನದಿ ಒಡಲಿನ ವಿಶ್ವದ ಪುರಾತನ ಶಿಲೆಗಳನ್ನು ಹೊಂದಿರುವ ಯಾಣದ ಪರಿಸರಕ್ಕೆ ಹೊಸ ಉಸಿರಾಟ ಸಿಗತೊಡಗಿತು. ಆಗಸದಲ್ಲಿ ಮೋಡಗಳಲ್ಲಿ ಲೀನವಾಗಿ ಆಮ್ಲಜನಕದ ಹೊಸ ರೂಪವನ್ನು ಸೇರಿಸುವುದು ಹೇಗೆ ಎಂದು ಪ್ರಶ್ನಾರ್ಥವಾಗಿ ಮೇಲೆ ನೋಡಿದ ಅವಿನಾಶ್ ಗೆ ಹೆಲಿಕಾಪ್ಟರ್ ಕಾಣಿಸಿತು.
ಸಂದೇಹವೇ ಇಲ್ಲ. ಮುಂದಿನದ್ದನ್ನು ಊಹಿಸಿದ ಅವಿನಾಶ್, ದ್ರಾವಣವನ್ನು ರಚಿತಾ ಕೈಗಿತ್ತು ಕುಸಿದ, ಅವಿನಾಶ್ ಕಡೆಗೆ ಒಮ್ಮೆ ನಿರ್ಭಾವುಕತೆಯಿಂದ ನೋಡುತ್ತಿದ್ದ ರಚಿತಾಳನ್ನು ಹೆಲಿ ಕಾಪ್ಟರ್ ನಲ್ಲಿ ಬಂದ ಸಿಬ್ಬಂದಿ ಆಗಸದಲ್ಲಿ ಹೊತ್ತೊಯ್ದರು. ಮೋಡದಲ್ಲಿ ಉಕ್ಕಿನ ಹಕ್ಕಿ ಹಾರುವ ವೇಳೆ ಜೀವರಾಶಿಗೆ ಉಸಿರಿನ ಗಾಳಿ ನೀಡಿ ರಚಿತಾ ಕೂಡಾ ಲೀನವಾದಳು. ನಾಶವಿಲ್ಲದವನಾಗಿ ಅವಿನಾಶ, ಹೊಸ ಉಸಿರಾಟ ರಚಿಸಿದ ರಚಿತಾ ಇಬ್ಬರು ತುಂಬಿದ ಜೀವ ಕಣವೇ ಮುಂದೆ ಕರ್ನಾಟಕವನ್ನು ರಕ್ಷಿಸಿತು.