ಎಲ್ಲಾ ಬದಲಾಗುತ್ತೆ, ಕಾಲ ಎಲ್ಲವನ್ನು ಮರೆಸುತ್ತದೆ ಎಂಬ ಮಾತು ನನಗೂ ಗೊತ್ತಿದೆ. ಆದರೆ. ಈ ಹೊತ್ತಿಗೆ ನೆನಪಿನ ಬುತ್ತಿ ಬಿಚ್ಚಿಡಲೇಬೇಕಿದೆ. ಹೌದು, ಬಾಲ್ಯದ ನೆನಪು ಮತ್ತೆ ಮರುಕಳಿಸುತ್ತಿದೆ. ಕಾರಣ, ಮಳೆ ಸುರಿಯುತ್ತಿದೆ ನೆನಪಿನ ದೋಣಿಯಲ್ಲಿ ಕೂರುವ ಹೊತ್ತಾಗಿದೆ
ನಾಡ ಹೆಂಚು, ಮಂಗ್ಳೂರ್ ಹೆಂಚಿನ ಮನೆ ಇದ್ದದ್ದು ಬದಲಾಗಿ, ತಾರಸಿ ಮನೆ ತಲೆ ಎತ್ತಿದೆ. ಮನೆ ಮುಂದಿನ ವಿದ್ಯುತ್ ಕಂಬ ಅದಕ್ಕೆ ಸುತ್ತಿದ ಸುರುಳಿ, ಸುರುಳಿ ವೈರುಗಳು ಇನ್ನಷ್ಟು ಹೆಚ್ಚಾಗಿವೆ. ಮುಂಚೆ ಇದ್ದ ಬಲ್ಬ್ ಬದಲಾಗಿ ಸೋಡಿಯಂ ವೆಪರ್ ದೀಪ ಬೆಳಗು ಹರಿಸುತ್ತಿದೆ.
ಮನೆಯ ಕಿಟಕಿಗೆ ಹರಿಯುತ್ತಿದ್ದ ಬೆಳಕಿನ ಪ್ರಮಾಣ ಸ್ಥಳ ಬದಲಾಗಿದೆ. ಬಾಗಿಲ ಪಕ್ಕದ ಕಿಟಕಿ ಈಗಿಲ್ಲ, ಹೊಸ ದೊಡ್ಡಗಾತ್ರದ ಕಿಟಕಿಗೆ ಹೊಸ ಬೆಳಕು ಮಹಡಿ ಮೇಲಿನ ಕಿಟಕಿಯಲ್ಲಿ ಇಣುಕಿದೆ.
ಆದರೆ, ಮಳೆ ಮಾತ್ರ ಅಂದಿನಂತೆ ಇಂದು ಸುರಿಯುತ್ತಿದೆ. ಇಲ್ಲಿನ ಮಳೆ, ಹವೆ, ಚಳಿ ಮಾತ್ರ ಬದಲಾಗುವುದಿಲ್ಲ.
ಮಳೆ ಬಿದ್ದಾಗ ಬೀದಿ ದೀಪ ಬೆಚ್ಚಗೆ ಮಲಗುವುದು ಮುಂದುವರೆದಿದೆ, ಆದರೆ. ಲೈನ್ ಮ್ಯಾನ್ ಬದಲಾಗಿದ್ದಾನೆ ಹೊಸ ಹೆಲ್ಮೆಟ್, ಏಣಿ ಸಿಕ್ಕಿದೆ, ಬೆಳಕಿನ ಭಾಗ್ಯ ಬೀದಿಗೆ ಬೇಗ ಮತ್ತೆ ಸಿಗುತ್ತಿದೆ.
ಬೀದಿ ದೀಪ ಮಲಗಿದಾಗಲೆಲ್ಲ ಮನೆ ಬೆಳಗುತ್ತಿದ್ದ ಸೀಮೆಎಣ್ಣೆ ಬುಡ್ಡಿದೀಪ ಬದಲಾಗಿದೆ, ಮೊಂಬತ್ತಿ, ಟಾರ್ಚ್ ಕೂಡಾ ಈಗಿಲ್ಲ, ಮೊಬೈಲಿನ ಟಾರ್ಚ್ ಬೆಳಕು ಎಲ್ಲದ್ದಕ್ಕೂ ಸಾಕು.
ಮಳೆ ಬಂದಾಗ ಮನೆಯ ತುಂಬೆಲ್ಲಾ ಸೋರುತ್ತಿದ್ದ ಮಾಳಿಗೆ, ಹೆಂಚು ಸರಿಸುವ ಕೊನೆ ಸಮಯದ ಸಾಹಸ ಈಗಿಲ್ಲ. ಹೊರಗೆ ಸುರಿವ ಮಳೆ ಕಿಟಕಿಯ ಗಾಜಿಗೆ ಬಡಿಯುವುದು ನೋಡಬಹುದು ಅಷ್ಟೆ.
ಮಳೆ, ಚಳಿ ಎನ್ನದೆ ಎಲ್ಲಾ ಕಾಲಕ್ಕೂ ಬೆಚ್ಚಗಿಡುತ್ತಿದ್ದ ಅಜ್ಜಿ ತಯಾರಿಸಿದ ಕೌದಿ ಈಗಿಲ್ಲ. ಅಜ್ಜಿಯೂ ಇಲ್ಲ, ಇಲ್ಲಗಳ ನಡುವೆ ಈ ಬೀದಿ, ಸ್ಥಳ, ಸಾಕಷ್ಟು ಸಾವು ನೋವು ನಲಿವು ಕಂಡಿದೆ. ಹೇಳುವುದಕ್ಕೆ ಬೇಕಾದಷ್ಟಿದೆ. . .
ಇನ್ನಷ್ಟು ನೆನಪಿನ ಬುತ್ತಿಯ ಲಹರಿಯನ್ನು ಇಲ್ಲಿ ಓದಿ