ಜಾಗತಿಕವಾಗಿ ಜೀವ ಭಯ ಹುಟ್ಟಿಸಿರುವ ಚೀನಿ ಮೂಲದ ಕೊರೋನ ವೈರಸ್ ನಗರ ಪಟ್ಟಣಗಳಲ್ಲದೇ ಗ್ರಾಮೀಣ ಭಾಗಗಳನ್ನು ಹಿಂಡುತ್ತಿದೆ. ಕೊರೊನಾ ಸೊಂಕು ತಗುಲಿ ಸಾವಿಗೀಡಾಗುತ್ತಿರುವುದು ಒಂದೆಡೆಯಾದರೆ ಕೊರೊನಾ ತಡೆಯಲು ತೆಗೆದುಕೊಳ್ಳಲೇ ಬೇಕಾಗಿದ್ದ ಕ್ರಮಗಳಿಂದ ತೀವ್ರ ಮಟ್ಟದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಆಹಾರ ಭದ್ರತೆ ವಿಷಯಗಳಲ್ಲಿ ಅತೀವ ಹಿನ್ನಡೆಯಾಗಿದೆ. ಪ್ರತಿಯೋರ್ವರೂ ವೈಯಕ್ತಿಕವಾಗಿ ‘ಸ್ವ-ಬಂಧನ’ ಹಾಕಿಕೊಂಡು ಕೊರೊನಾ ವೈರಸ್ ನಮ್ಮಿಂದ ಬೇರೆಯವರಿಗೆ ಹಾಗೂ ಬೇರೆಯವರಿಂದ ನಮಗೆ ಹರಡದಂತೆ ಎಚ್ಚರಿಕೆ ಅಗತ್ಯ ಮತ್ತು ಈ ವಿಷಯದಲ್ಲಿ ಸರಿಯಾದ ಮಾಹಿತಿ ಇಲ್ಲದವರಿಗೆ ಜಾಗೃತಗೊಳಿಸಿ ರೋಗಮುಕ್ತ ಸಮಾಜ ನಿರ್ಮಾಣದತ್ತ ಜವಾಬ್ದಾರಿಯಿಂದ ಸಾಗಬೇಕಿದೆ.
ರೈತ ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಹಾಳಾಗುತ್ತಿದೆ. ಬಡ ಮತ್ತು ಮದ್ಯಮ ವರ್ಗದ ರೈತ…. ಎಲ್ಲೋ ಕೆಲವು ಹಣ್ಣು ಮತ್ತು ತರಕಾರಿಗಳನ್ನು ಹೊರತು ಪಡಿಸಿದರೆ, ಮಿಕ್ಕ ಬೆಳೆಗಳನ್ನು ಯಾವಾಗ ಮಾರಾಟ ಮಾಡುವುದು ಎಂಬುದೇ ಅನಿಶ್ಚಿತ. ಇದರಿಂದ ಹಿಂದೆಂದೂ ಕಾಣದ ಆರ್ಥಿಕ ಮುಗ್ಗಟ್ಟು ತಲೆದೋರಿದೆ. ಈ ಕೊರೊನಾ ಪರಿಣಾಮದ ನಂತರ ರೈತರು ಸಾಲ ಮರುಪಾವತಿಗೆ ಇನ್ನಿಲ್ಲದ ಕಷ್ಟಗಳನ್ನು ಅನುಭವಿಸಲಿದ್ದಾರೆ ಎಂಬುದು ಕಟು ಸತ್ಯ. ಸರಿಯಾಗಿ ವ್ಯಾಪಾರ ಆರಂಭವಾಗಿ ವ್ಯಾಪಾರಿ ಮಧ್ಯವರ್ತಿಗಳಲ್ಲಿ ಖರೀದಿ ಸ್ಫರ್ಧೆ ಪ್ರಾರಂಭವಾದಂತೂ ರೈತೋತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲಾರದು ಎಂದು ರಮೇಶ್ ಕಾನುಗೋಡು ಹೇಳಿದ್ದಾರೆ