ಕೊರೊನಾವೈರಸ್ ದೆಸೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಕಾಲ ಮುಂದುವರೆಯಲಿದೆ. ಈ ನಡುವೆ ಅನೇಕ ಕ್ಷೇತ್ರದ ಕಾರ್ಮಿಕರಿಗೆ ಅದರಲ್ಲೂ ಗುತ್ತಿಗೆ ಆಧಾರಿತ ನೌಕರರಿಗೆ ಉದ್ಯೋಗ ಭದ್ರತೆಯ ಚಿಂತೆ ಎದುರಾಗಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯದ ಸೂಚನೆಯಂತೆ, ಕಾರ್ಮಿಕ ಇಲಾಖೆ ಇಂದು ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶವು ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯವಾಗಲಿದ್ದು, ಗುತ್ತಿಗೆ ಆಧಾರಿತ, ಅರೆ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು, ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಸೂಚಿಸಲಾಗಿದೆ.
ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಕ್ಯಾಪ್ಟನ್ ಮಣಿವಣ್ಣನ್ ನೀಡಿರುವ ಪ್ರಕಟಣೆಯಂತೆ, ಕೋವಿಡ್-19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಎಲ್ಲಾ ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಉದ್ಯೋಗದಾತರು, ತಮ್ಮ ಉದ್ಯೋಗಿಗಳನ್ನು, ವಿಶೇಷವಾಗಿ ಕ್ಯಾಸುಯಲ್ಟಿ ಕೆಲಸಗಾರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ವಿಪತ್ತು ನಿರ್ವಹಣೆ ಕಾಯ್ದೆ 2005 ಸೆಕ್ಷನ್ 69ರಡಿಯಲ್ಲಿ ಆದೇಶಿಸಿದ್ದಾರೆ.