ಪುತ್ತೂರು ತಾಲೂಕಿನ ಕೆಯ್ಯೂರಿನ ಎನ್.ಮುತ್ತಪ್ಪ ರೈಯವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 13ರ ರಾತ್ರಿ ವೇಳೆಗೆ ಎನ್. ಮುತ್ತಪ್ಪ ರೈಯವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದರು. ಶುಕ್ರವಾರ ಮುಂಜಾನೆ 2 ಗಂಟೆ ನಂತರ ಉಸಿರು ಚೆಲ್ಲಿದ್ದಾರೆ.
ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರೂ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ನ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಮುತ್ತಪ್ಪ ರೈಯವರು ಪ್ರಸ್ತುತ ಬೆಂಗಳೂರಿನ ಬಿಡದಿಯಲ್ಲಿ ವಾಸವಿದ್ದರು. ಕನ್ನಡ ನಾಡಿನ ಪರ ಹೋರಾಟ ಮಾಡುವ ಹಾಗೂ ಹೊಸದೊಂದು ಚಳವಳಿಗೆ ರೂಪ ನೀಡುವ ಉದ್ದೇಶದಿಂದ ಎನ್.ಮುತ್ತಪ್ಪ ರೈರವರ ಜಯ ಕರ್ನಾಟಕ ಸಂಸ್ಥೆ ಹತ್ತು ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು. ಪತ್ರಕರ್ತ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಅವರು ನಿಯೋಜಿತ ಅಧ್ಯಕ್ಷರಾಗಿ ಮೊದಲಿಗೆ ಕಾರ್ಯ ನಿರ್ವಹಿಸಿದ್ದರು.
ಭೂಗತ ಲೋಕ, ದುಬೈ ಸಹವಾಸದಿಂದ ದೂರ ಉಳಿದಿದ್ದ ಮುತ್ತಪ್ಪ ರೈ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಜಯ ಕರ್ನಾಟಕ ಸಂಘಟನೆ ಸ್ಥಾಪಿಸಿದಾಗಲೂ ಎಲ್ಲರೂ ಅನುಮಾನದಿಂದಲೇ ನೋಡತೊಡಗಿದ್ದರು. ರೋಲ್ ಕಾಲ್ ಮಾಡಲು ಇದೊಂದು ಮಾರ್ಗ ಎಂದು ಅನೇಕರು ಟೀಕಿಸಿದ್ದರು. ಆದರೆ, ರಾಜ್ಯವ್ಯಾಪ್ತಿಯಾಗಿ ಸಂಘಟನೆ ಬೆಳೆದು, ಸಾಮಾಜಿಕ ಕಳಕಳಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಟೀಕೆಗೆ ಉತ್ತರಿಸಿದ್ದರು.
Read more at: https://kannada.oneindia.com/features/obituary-jaya-karnataka-organisation-founder-muthappa-rai-demise-191987.html