ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ ಈಗ ಮತ್ತೊಂದು ಆಘಾತಕಾರಿ ಹೆಜ್ಜೆ ಇಟ್ಟಿದೆ.
ಗಡಿಭಾಗದ ಲಿಪುಲೇಖ್, ಕಾಲಾಪಾನಿ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಿರುವ ನಕ್ಷೆ ಬಿಡುಗಡೆ ಮಾಡಿ ವಿವಾದಕ್ಕೆ ನಾಂದಿ ಹಾಡಿದ್ದ ನೇಪಾಳ ಈಗ ಚೀನಾಕ್ಕೆ ರಸ್ತೆ ನಿರ್ಮಾಣ ಮಾಡತೊಡಗಿದೆ. ಲಿಪುಲೇಖ್ ಪ್ರದೇಶವನ್ನು ಸಂಪರ್ಕಿಸುವ ಉತ್ತರಾಖಂಡ್ ದಾರ್ಚುಲಾ ಪ್ರದೇಶದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೊತೆಗೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಚರ್ಚೆ ನಡೆಸಿದ್ದಾರೆ. ಈ ಬೆನ್ನಲ್ಲೇ 12 ವರ್ಷಗಳಿಂದ ಸ್ಥಗಿತಗೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ನೇಪಾಳ ಚಾಲನೆ ನೀಡಿದೆ.
12 ವರ್ಷಗಳ ಬಳಿಕ ಚೀನಾ ಗಡಿಗೆ ಸಂಪರ್ಕ: ನೇಪಾಳ- ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. 2008ರಲ್ಲಿ ಟಿಂಕಾರ್ ಪಾಸ್ ನಿರ್ಮಾಣದ ವೇಳೆ ಪ್ರತಿಕೂಲ ಹವಾಮಾನ, ಪ್ರತಿಕೂಲ ಸನ್ನಿವೇಶ ಎದುರಾಗಿದ್ದರಿಂದ ರಸ್ತೆ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು. 2015ರಲ್ಲಿ ಭಾರತ ಹಾಗೂ ಚೀನಾ ನಡುವಿನ ರಸ್ತೆ ಸಂಪರ್ಕಕ್ಕೆ ಕೊಂಡಿಯಾಗಲು ನಿರಾಕರಿಸಿದ್ದ ನೇಪಾಳ, ವಿರೋಧ ವ್ಯಕ್ತಪಡಿಸಿತ್ತು.