ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ತೆರಳುವಂತೆ ಗೃಹ ಸಚಿವಾಲಯ ನಿರ್ದೇಶಿಸಿರುವ ಸುದ್ದಿ ಓದಿರಬಹುದು. ಈಗ ಈ ಗೂಢಚಾರಿಗಳು ಹೂಡಿದ್ದ ಸಂಚಿನ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಮುಖ್ಯವಾಗಿ ಇವರಿಬ್ಬರು ರೈಲ್ವೆ ಅಧಿಕಾರಿಗಳ ಮೂಲಕ ಭಾರತೀಯ ಸೇನೆ ತುಕಡಿ ಸಂಚಾರದ ಮಾಹಿತಿಯನ್ನು ಕಲೆ ಹಾಕಲು ಯತ್ನಿಸುತ್ತಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ. ಒನ್ಇಂಡಿಯಾಕ್ಕೆ ಲಭ್ಯವಿರುವ ಮಾಹಿತಿಯಂತೆ, ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಬಿದ್ ಹುಸೇನ್ ಹಾಗೂ ಮೊಹಮ್ಮದ್ ತಾಹೀರ್ ಇಬ್ಬರು ತಮ್ಮದೇ ಆದ ಜಾಲವನ್ನು ರೂಪಿಸಿದ್ದರು. ರೈಲ್ವೆ ಅಧಿಕಾರಿಗಳನ್ನು ಬಳಸಿಕೊಂಡು ಭಾರತೀಯ ಸೇನೆಯ ವಾಹನ ಮಾಹಿತಿ ಕಲೆ ಹಾಕಿದ್ದರು. ಇತ್ತೀಚೆಗೆ ಮಾಹಿತಿ ಕಲೆಹಾಕಲು ಹೊರಗೆ ಬಂದಿದ್ದಾಗ ಗುಪ್ತಚರ ಇಲಾಖೆ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿದ್ದಾರೆ.
ಮಿಲಿಟರಿ ಗುಪ್ತಚರ ಇಲಾಖೆ, ದೆಹಲಿ ಸ್ಪೆಷಲ್ ಸೆಲ್, ಗುಪ್ತಚರ ಇಲಾಖೆ(ಐಬಿ) ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು. ಇಬ್ಬರ ಬಳಿ ನಕಲಿ ಆಧಾರ್ ಕಾರ್ಡ್, ಸ್ಥಳೀಯ ನಿವಾಸಿಗಳು ಎನ್ನಲು ಬೇಕಾದ ಎಲ್ಲಾ ದಾಖಲೆಗಳಿರುವುದು ಕಂಡು ಬಂದಿದೆ. ನಕಲಿ ದಾಖಲೆಗಳನ್ನು ಹೊಂದಿದ್ದಲ್ಲದೆ, ಪಾಕ್ ಪರ ಬೇಹುಗಾರಿಕೆ ನಡೆಸಿದ ಇವರನ್ನು persona-non granta ಅಡಿಯಲ್ಲಿ ರಾಯಭಾರ ಕಚೇರಿ ಹುದ್ದೆಯಿಂದ ಕೆಳಗಿಳಿಸಿ ಅವರ ದೇಶಕ್ಕೆ ಮರಳಲು ಸೂಚಿಸಲಾಗಿದೆ