ವೀಳ್ಯದೆಲೆ ಅಡಿಕೆ ಚಟಪಟ ಚೂರ್ಣ
ಬೇಕಾದ ಸಾಮಾಗ್ರಿಗಳು:
ವೀಳ್ಯದೆಲೆ: 150
ಏಲಕ್ಕಿ: 10
ಜಾಕಾಯಿ: 1
ಜಾಪತ್ರೆ: 1
ಗಸಗಸೆ: 2 ರಿಂದ 3 ಚಮಚ
ಅಡಿಕೆ ಪುಡಿ: 250 ಗ್ರಾಂ
ಲವಂಗ: 10
ತುಪ್ಪ: 5 ಚಮಚ
ಒಣ ಕೊಬರಿ: ಅರ್ಧ ಅಥವಾ ಒಂದು ಗಿಟುಕು
ಕಲ್ಲು ಸಕ್ಕರೆ ಅಥವಾ ಡೈಮಂಡ್ ಸಕ್ಕರೆ: 100 ಗ್ರಾಂ
ಸೂಚನೆ: ವೀಳ್ಯದೆಲೆ ಹಾಗೂ ಅಡಿಕೆಪುಡಿ ಪ್ರಮಾಣ ಹೆಚ್ಚಿದಂತೆ ಇತರೆ ಸಾಮಾಗ್ರಿಗಳನ್ನು ಸರಿ ಹೊಂದಿಸಿಕೊಳ್ಳತಕ್ಕದ್ದು.
ಮಾಡುವ ವಿಧಾನ:
ಉತ್ತಮ ಗುಣಮಟ್ಟದ ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಶುದ್ಧ ನೀರಿನಲ್ಲಿ ಎಲೆಯನ್ನು ಚೆನ್ನಾಗಿ ತೊಳೆದು, ಒಳ್ಳೆ ಬಟ್ಟೆಯಿಂದ ಒರೆಸಿರಿ. ಪ್ರತಿ ಎಲೆಯ ತೊಟ್ಟುಗಳನ್ನು ಬೇರ್ಪಡಿಸಿ, ನಂತರ ಎಲೆಗಳನ್ನು ಅತಿ ಸಣ್ಣದಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿದ ಎಲೆಗಳನ್ನು ಒಂದೆರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಿ.
ಒಂದು ಮಧ್ಯಮ ಗಾತ್ರದ ಬಾಣಲೆಯನ್ನು ತೆಗೆದುಕೊಂಡು, ತೇವಾಂಶ ಇರದಂತೆ ಚೆನ್ನಾಗಿ ಒರೆಸಿ, ನಂತರ ಒಲೆಯ ಮೇಲಿಡಿ. ಒಲೆ ಹಚ್ಚಿ, ಉರಿ ಸಣ್ಣ ಮಾಡಿಕೊಳ್ಳಿ. ಬಾಣಲೆಗೆ 5 ಚಮಚ ತುಪ್ಪ ಸುರಿಯಿರಿ, ಒಣಗಿದ ವೀಳ್ಯದೆಲೆಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯಿರಿ.
ಕೆಲ ನಿಮಿಷಗಳ ಬಳಿಕ ಹಸಿರು ಬಣ್ಣದ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹೆಚ್ಚು ಕಪ್ಪಾಗದಂತೆ ಕೈಯಾಡಿಸುತ್ತಾ ಹುರಿಯಿರಿ.[ಕರಿಬೇವಿನ ಎಲೆಯನ್ನು ಹುರಿದ ಬಳಿಕ ಗರಿಗರಿಯಾಗುವಂತೆ ಇದು ಕೂಡಾ ಗರಿಗರಿಯಾಗುವ ತನಕ ಹುರಿಯ ತಕ್ಕದ್ದು]. ಹೀಗೆ ಎಲ್ಲಾ ಎಲೆಗಳನ್ನು ಹುರಿದ ಬಳಿಕ ಒಂದು ಪಾತ್ರೆಗೆ ಹಾಕಿ ಪಕ್ಕಕಿಡಿ. ಒಲೆಯನ್ನು ಸದ್ಯಕ್ಕೆ ಆರಿಸಿ.
*****
ಒಣ ಕೊಬರಿ ತುರಿದುಕೊಂಡು, ಸಣ್ಣ ಉರಿಯಲ್ಲಿ ಹುರಿದಿಟ್ಟುಕೊಳ್ಳಿ. ಇನ್ನೊಂದೆಡೆ ಜಾಕಾಯಿ, ಜಾಪತ್ರೆ, ಲವಂಗ, ಗಸಗಸೆಯನ್ನು ಹುರಿದುಕೊಳ್ಳಿ. ಹುರಿದ ಸಾಮಾಗ್ರಿಗಳು ಸ್ವಲ್ಪ ತಣ್ಣದಾಗ ಬಳಿಕ, ಕುಟ್ಟಿ ಪುಡಿ ಮಾಡಿದ ಕಲ್ಲು ಸಕ್ಕರೆಯೊಂದಿಗೆ ಬೆರೆಸಿ ಪಕ್ಕಕ್ಕಿಟ್ಟುಕೊಳ್ಳಿ.
****
ಉತ್ತಮ ಗುಣಮಟ್ಟದ ಹೆಚ್ಚು ಬಣ್ಣ ಮಿಶ್ರಣವಿರದ ಅಡಿಕೆ ಪುಡಿಯನ್ನು ಬಾಣಲೆಯಲ್ಲಿ ಹುರಿದುಕೊಳ್ಳಿ. ಹುರಿದ ಅಡಿಕೆ ಪುಡಿ ತಣ್ಣದಾಗ ಬಳಿಕ ಮಿಕ್ಸರ್‌ಗೆ ಹಾಕಿ ಜೊತೆಗೆ ಹುರಿದ ಒಣಕೊಬರಿಯನ್ನು ಸೇರಿಸಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
***
ವೀಳ್ಯದೆಲೆ ಹಾಗೂ ಗಸಗಸೆ ಬೆರೆಸಿ, ಜೊತೆಗೆ ಜಾಕಾಯಿ, ಜಾಪತ್ರೆ, ಲವಂಗ, ಕಲ್ಲು ಸಕ್ಕರೆ ಮಿಶ್ರಣವನ್ನು ಸೇರಿಸಿಕೊಳ್ಳಿ. ಎಲ್ಲವನ್ನು ಮಿಕ್ಸರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ.
****
ಸೂಚನೆ:
- ಅಡಿಕೆ ವೀಳ್ಯದೆಲೆ ಚಟಪಟ ಚೂರ್ಣವನ್ನು ಆಹಾರ ಸೇವನೆ ನಂತರವೇ ಸೇವಿಸತಕ್ಕದ್ದು.
- ಅತಿಯಾದ ರಕ್ತದೊತ್ತಡವಿರುವವರು, ಹೃದಯ ರೋಗಿಗಳು, ಕರುಳುಬೇನೆ ಇರುವವರು ಈ ಚೂರ್ಣವನ್ನು ಸೇವಿಸದಿದ್ದರೆ ಒಳ್ಳೆಯದು.
ಉಪಯೋಗಗಳು:
- ಹಲ್ಲಿನ ಆರೋಗ್ಯಕ್ಕೆ ಉಪಯುಕ್ತ, ಒಸಡನ್ನು ಬಲಪಡಿಸುತ್ತದೆ, ಜಿಹ್ವಾರಸವನ್ನು ಹೆಚ್ಚಿಸುತ್ತದೆ, ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ.
ಕಫ ಕರಗಿಸುತ್ತದೆ, ಅಜೀರ್ಣ ಉಪಶಮನಗೊಳಿಸುತ್ತದೆ. ಹೊಸ ಉತ್ಸುಕತೆ ಮೂಡಿಸುತ್ತದೆ. - ತಾಂಬೂಲಾ, ಬೀಡಾ ಸೇವನೆಯ ಎಲ್ಲಾ ಪ್ರಯೋಜನಗಳು ಈ ಚೂರ್ಣದಿಂದ ಪಡೆದುಕೊಳ್ಳಬಹುದು. ವಿಶೇಷವಾಗಿ ಬಾಣಂತಿಯರಿಗೆ ನೀಡಲಾಗುತ್ತದೆ.
ಗಮನಿಸಿ: ಮಿಕ್ಸರ್‌ಗೆ ಹಾಕಿದ ಮಿಶ್ರಣಗಳು ತಣ್ಣಗಾದ ನಂತರ ಒಟ್ಟಿಗೆ ಬೆರೆಸತಕ್ಕದ್ದು. ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಕೊನೆಯಲ್ಲಿ ಬೆರೆಸಬಹುದು ಅಥವಾ ಅಡಿಕೆಪುಡಿ ಮಿಶ್ರಣದ ಜೊತೆಗೆ ಮಿಕ್ಸಿಗೆ ಹಾಕಬಹುದು.
ವೀಳ್ಯದೆಲೆ ಮಿಶ್ರಣ ಹಾಗೂ ಅಡಿಕೆ ಪುಡಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕೈಯಲ್ಲೇ ಕಲೆಸಿ, ನಂತರ ಸೇವಿಸಬಹುದು.
ಸಿಹಿ ಮುಂದು ಬೇಕು ಎನ್ನುವವರು ಕೊನೆಯಲ್ಲಿ ಕಲ್ಲು ಸಕ್ಕರೆ ಅಥವಾ ಡೈಮಂಡ್ ಸಕ್ಕರೆ ಪುಡಿಯನ್ನು ತಮ್ಮ ರುಚಿಗೆ ತಕ್ಕಷ್ಟು ಸೇರಿಸಿಕೊಳ್ಳಬಹುದು. ಚೂರ್ಣ ಒಂದು ವೇಳೆ ಹೆಚ್ಚು ಖಾರ, ಒಗರು ಎನಿಸಿದರೆ ಒಣಕೊಬರಿಯನ್ನು ಮೇಲೆ ಉದುರಿಸಿ ನಿಮ್ಮ ರುಚಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬಹುದು.