In Memory of S.K Shama Sundara: Pioneer in Kannada Digital Journalism | ಡಿಜಿಟಲ್ ಪತ್ರಿಕಾರಂಗದ ಆದ್ಯಪ್ರವರ್ತಕ ಎಸ್ಕೆ ಶಾಮಸುಂದರ

SK Shama Sundara

ಜೀವನ ಉತ್ಸಾಹಿ, ಸೊಗಸುಗಾರ ಶಾಮಿ ನೆನಪು

Its Shama Sundara not ShyamSundar.. ತಮ್ಮ ಹೆಸರಿನ ಸರಿಯಾದ ಸ್ಪೆಲ್ಲಿಂಗ್ ಬಗ್ಗೆ ಶಾಮ್ ಸಾರ್ (ಎಸ್ಕೆ ಶಾಮಸುಂದರ) ಆಗಾಗ ತಿದ್ದುಪಡಿ ಮಾಡುತ್ತಿದ್ದರು. ಸಮಯಪಾಲನೆ ಬಗ್ಗೆ ಹೇಳುತ್ತಿದ್ದ ಶಾಮಿ ಏಪ್ರಿಲ್ 14, 2025ರಂದು ಕಾಲವಾಗಿದ್ದಾರೆ. Love him or Hate Him You can’t Ignore Him ಅಂಥ ವ್ಯಕ್ತಿತ್ವ.

ಶಾಮ್ ಹೀಗಿದ್ರು, ಹಾಗಿದ್ರು, ಹಂಗಂತೆ, ಹಿಂಗಂತೆ ಅಂತೆ ಕಂತೆಗಳ ನಡುವೆ ಹಲವರಿಗೆ ನಿಗೂಢವಾಗಿ, ಕೆಲವರಿಗೆ ಆಪ್ತರಾಗಿ, ಮತ್ತೆ ಕೆಲವರಿಗೆ ಪ್ರಾತಃ/ಸಾಯಂಸ್ಮರಣೀಯರಾಗಿ ಬಹುಜನರಿಗೆ ಪರಿಚಿತರಾಗಿ ಜನಾನುರಾಗಿ ಇದ್ದವರು.

ಅಭಿಮಾನಿಯಾಗಿ ಇದ್ದ ನಾನು ಮುಂದೆ ಅವರ ಜೊತೆ ಹತ್ತಾರು ವರ್ಷ ಕಾರ್ಯ ನಿರ್ವಹಿಸುವ ಸಂದರ್ಭ ಒದಗಿ ಬಂದಿದ್ದು ವಿಧಿ ಲಿಖಿತವಾಗಿತ್ತೇನೋ. ದಿನನಿತ್ಯದ ಸುದ್ದಿಮನೆ ಗುದ್ದಾಟದಲ್ಲಿ ಸಿಕ್ಕ ಸಿಹಿ ಕಹಿ ನೆನಪುಗಳು ಈ ಜೀವನಕ್ಕೆ ಸಾಕಾಗುವಷ್ಟಿದೆ. ನೆನಪಿರುವಷ್ಟು ಬರೆದಿದ್ದೇನೆ.

ಸಾಪ್ತಾಹಿಕ ಪ್ರಭದ ನಂಟು

ಕನ್ನಡಪ್ರಭದಲ್ಲಿ ವೈಯನ್ಕೆ, ಕೆ ಸತ್ಯನಾರಾಯಣ ಅವರ ಅವಧಿಯಲ್ಲಿ ಬರುತ್ತಿದ್ದ ಸಾಪ್ತಾಹಿಕ ಪ್ರಭ ಆ ಕಾಲದಲ್ಲಿ ನನ್ನಂತ ಹಲವರಿಗೆ ಓದಿನ ಹುಚ್ಚು ಹತ್ತಿಸಿದ್ದು ಸುಳ್ಳಲ್ಲ. ಈ ಬಗ್ಗೆ ಜೋಗಿ ಬರೆದುಕೊಂಡಿದ್ದಾರೆ ಓದಿ…

ಟಿಪಿ ಕೈಲಾಸಂ(ಬಿ.ಎಸ್ ಕೇಶವರಾವ್), ಅನಕೃ, ಕಾಳಿಂಗರಾಯರ ಜೀವನಗಾಥೆ, ಯಂತ್ರ ಮಂತ್ರ ತಂತ್ರ(ಗಂಡಸಿ ವಿಶ್ವೇಶ್ವರ)ದಂಥ ಸರಣಿ, ವಿಜ್ಞಾನ ವಿಹಾರ/ವಿಶೇಷ(ಕಣಾದ) ಕಥೆ ಹೀಗೆ ಒಂದೊಂದು ಸಂಗ್ರಹ ಯೋಗ್ಯವಾಗಿತ್ತು. ಕೆಲವು ಪೇಪರ್ ಕಟ್ಟಿಂಗ್ ಇನ್ನೂ ಜೋಪಾನ ಮಾಡಿಟ್ಟಿದ್ದೀನಿ ಕೂಡಾ.

SK Shama Sundara

ಇದಾಗಿ ಸುಮಾರು ಇಪ್ಪತ್ತು ವರ್ಷಗಳ ಬಳಿಕ ನಾನು ದಟ್ಸ್‌ಕನ್ನಡ.ಕಾಂ ಸೇರಿ ಸುದ್ದಿ ಮನೆ ಕಥೆಗಳ ಬಗ್ಗೆ ಎಡಿಟರ್ ಶಾಮ್ ಜೊತೆ ಮಾತಾಡುವಾಗ ವೈಯನ್ಕೆ, ಸಾಪ್ತಾಹಿಕ ಪ್ರಭ ಅಂಕಣ ಬರಹಗಳ ಬಗ್ಗೆ ಅಭಿಮಾನದಿಂದ ಪ್ರಶ್ನೆ ಕೇಳಿದ್ದೆ. ವೈಯೆನ್ಕೆ ಬಗ್ಗೆ ಬರೀರಿ ಅಂತಾ ಹತ್ತು ಹಲವು ಬಾರಿ ಕೇಳಿಕೊಂಡೆ, ಯಾವುದಾದರೂ ಪ್ರಸಂಗ ನೆನಸಿಕೊಂಡು ಹೇಳುತ್ತಿದ್ದರೆ ವಿನಾ ಒಂದು ಲೇಖನವೂ ಬರೆಯಲಿಲ್ಲ.

ಟೈಟಲ್ ಕಿಂಗ್

ಯಾವುದೇ ಲೇಖನವಿರಲಿ ಅದಕ್ಕೆ ಸೂಕ್ತ ಹೆಡ್‌ಲೈನ್, ಚಿತ್ರ ಹೊಂದಿಸುವುದು ಶಾಮಣ್ಣಂಗೆ ಒಲಿದಿದ್ದ ಅದ್ಭುತ ಕಲೆಯಾಗಿತ್ತು. ವೆಬ್‌ತಾಣದಲ್ಲಿ ದೊಡ್ಡ, ಚಿಕ್ಕ ಹೆಡ್ಡಿಂಗ್ ಕೊಡೋದು ಅದು ವರ್ಕ್ ಆಗಿಲ್ಲ ಅಂದ್ರೆ ಬೇಕಾದಾಗ ಬದಲಾಯಿಸೋದು ಇದೆಲ್ಲ ದಿನನಿತ್ಯ ಅವರಿಗೆ ಸಕತ್ ಇಷ್ಟವಾದ ಕಸರತ್ತಾಗಿತ್ತು. ಮೊದಲೆಲ್ಲ ಇದು ನಮಗೆ ಕಷ್ಟದ ಕೆಲಸವಾಗುತ್ತಿತ್ತು, ಆಗೆಲ್ಲ HTML ಪೇಜ್ ಮಾಡಿ ಸರ್ವರ್‌ಗೆ ಅಪ್‌ಲೋಡ್ ಮಾಡಬೇಕಿತ್ತು. ಲೇಖನದಲ್ಲಿ ಏನಾದರೂ ತಪ್ಪಿದ್ದರೆ ಅಥವಾ ಇಮೇಜ್ ಬದಲಾಯಿಸಬೇಕಾಗಿದ್ದರೆ, ತಕ್ಷಣಕ್ಕೆ ಆಗುತ್ತಿರಲಿಲ್ಲ, ಇದೆಲ್ಲ ಶಾಮಿಗೆ ಕಿರಿಕಿರಿ ತರೆಸುತ್ತಿತ್ತು, ಆಮೇಲೆ ಸಿಎಂಎಸ್ ಬಂದ ಮೇಲೆ ಕೆಲ್ಸ ಸುಲಭವಾಗಿ ಬಿಟ್ಟಿತು.

ಒಂದು ಕಾಲದಲ್ಲಿ(ಸಿಲ್ಕ್ ಬೋರ್ಡ್ ಆಫೀಸ್) ಸಾಹಿತ್ಯ ಸಂಸ್ಕೃತಿ ಲೇಖನ ನಂಬಿಕೊಂಡಿದ್ದ ವೆಬ್ ತಾಣ ದಟ್ಸ್‌ಕನ್ನಡದಲ್ಲಿ ಹತ್ತು ಹದಿನೈದು ಅಂಕಣ ಬರಹಗಳು ಪ್ರಕಟವಾಗುತ್ತಿತ್ತು. ಅನಿವಾಸಿ ಕನ್ನಡಿಗರಲ್ಲದೆ(ಈ ಬಗ್ಗೆ ಶ್ರೀವತ್ಸ ಜೋಶಿ ಅವ್ರು ವಿವರವಾಗಿ ಬರೆದಿದ್ದಾರೆ ಓದಿ) ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ಎಆರ್ ಮಣಿಕಾಂತ್, ಅಂಜಲಿ ರಾಮಣ್ಣ ಹಾಗೂ ರವಿ ಬೆಳಗೆರೆ ಲೇಖನಗಳನ್ನು ಬಳಸಲು ಅಲಿಖಿತ ಒಪ್ಪಿಗೆ ಇತ್ತು.

ನಮಗಂತೂ ಕಾಪಿ ತಿದ್ದಲು ಖುಷಿಯಾಗುತ್ತಿತ್ತು. ಅದರಲ್ಲೂ ಜೋಶಿ, ಆರ್‌ಬಿ ಅಂಕಣ ತಿದ್ದೋಕೆ ಪೈಪೋಟಿಯಂತೂ ಇತ್ತು. ಶಾಮಿ ಯಾರಿಗೆ ಇಮೇಲ್ ಹಾಕುತ್ತಾರೋ ಎಂದು ಕಾದಿರುತ್ತಿದ್ದೆವು. ಕಾರಣ ಇಷ್ಟೆ. ಅವರಿಬ್ಬರ ಕಾಪಿ ತುಂಬಾ ನೀಟ್ ಆಗಿರುತ್ತಿತ್ತು. ಲೇಖನಕ್ಕೆ ಯಾವ ಚಿತ್ರಗಳು ಸೂಕ್ತ ಎಂಬ ಸಲಹೆ ಸೂಚನೆಗಳು ಇರುತ್ತಿದ್ದವು, ಇಲ್ಲವೆ ಇಮೇಲ್ ಜೊತೆಗೆ ಸೂಕ್ತ ಚಿತ್ರಗಳು ಬರುತ್ತಿದ್ದವು. ಇಲ್ಲದಿದ್ದರೆ ಸೂಕ್ತ ಚಿತ್ರಕ್ಕಾಗಿ ಶಾಮ್ ಸಾರ್ ಸಂಜೆ ತನಕ ಕೂರಿಸಿ ಬಿಡಬಹುದು ಎಂಬ ನಿರೀಕ್ಷಿತ ಆತಂಕವಿತ್ತು. ರವಿ ಬೆಳಗೆರೆ ಕೈಬರಹ ನೋಡಿದವರಿಗೆ ಗೊತ್ತಿರುತ್ತದೆ ಒಂದು ಚಿತ್ತಿಲ್ಲದ ಲೇಖನ ಹೇಗಿರುತ್ತದೆ ಎಂದು. ಅಂಕಣ ಬರಹ, ಸಿಲ್ಕ್ ಬೋರ್ಡ್ ಆಫೀಸ್ ನೆನಪು ಬದಿಗಿಟ್ಟು ಶಾಮಿ ಅಂಡ್ ಟೈಟಲ್ ವಿಷಯಕ್ಕೆ ಬಂದರೆ.

ಎಡಿಟರ್ ಶಾಮಿ ಮುಂದೆ ಒನ್‌ಇಂಡಿಯಾ ವೆಬ್‌ತಾಣ ಮುನ್ನೆಡೆಸುವಾಗ ಪ್ರಧಾನವಾಗಿ ಬ್ರೇಕಿಂಗ್ ಸುದ್ದಿ, ತಕ್ಷಣಕ್ಕೆ ಹೋಗಬೇಕಾದ ಸುದ್ದಿಗಳಿಗೆ ಆದ್ಯತೆ ನೀಡಬೇಕಿತ್ತು. ರೇಸಿನಲ್ಲಿ ಓಡುವ ಕುದುರೆಗಳಂತೆ ಸುದ್ದಿ ಉತ್ಪಾದನೆಯಲ್ಲಿ ತೊಡಗಿರಬೇಕಿತ್ತು. ಆ ಕೆಲಸವನ್ನು ಟೀಂ ಮಾಡುತ್ತಿತ್ತು. ಆದರೆ, ಶಾಮಿಗೆ ಮಧ್ಯದಲ್ಲಿ ಯಾವುದಾದರೂ ಸುದ್ದಿ ಕಣ್ಣಿಗೆ ಬಿದ್ದರೆ ರೇಸ್ ಅಲ್ಲಿಗೆ ನಿಲ್ಲುತ್ತಿತ್ತು. ಆ ಸುದ್ದಿ ಅವರ ಕ್ಯಾಬಿನ್ ಹೊಕ್ಕು ಚೆಂದದ ಹೆಡ್ಡಿಂಗ್ ಕಿರೀಟ ತೊಟ್ಟು ಹೊರ ಬರುವಷ್ಟರಲ್ಲಿ ರೇಸ್ ಮರೆಯಬೇಕಾಗುತ್ತಿತ್ತು.

ಬರಬರುತ್ತಾ ಅವರಿಗೂ ಈ ತೀವ್ರ ಪರಿಸ್ಥಿತಿ ಅರಿವಾಗಿ ಫೀಚರ್, ಅಂಕಣ, ತೀರಾ ಪ್ರಮುಖ ಸುದ್ದಿಗಳತ್ತ ಮಾತ್ರ ಕಣ್ಣಾಡಿಸಿ, ಚೆಂದಗಾಣಿಸಿ ಕಳಿಸುತ್ತಿದ್ದರು. ಈ ಸಮಯದಲ್ಲಿ ನಾಲ್ಕಾರು ಸಿಗರೇಟ್ ಬೂದಿಯಾಗಿರುತ್ತಿತ್ತು. ಏನಾದರೂ ಶಾಮ್ ಕೊಡುತ್ತಿದ್ದ ‘ಹೆಡ್ಡಿಂಗ್ ‘ ಕಿಕ್ಕೇ ಬೇರೆ. ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯರ ಗ್ಯಾಲರಿಗೆ ಮೂರ್ನಾಲ್ಕು ಪದಗಳ ಹೆಡ್ಡಿಂಗ್ ಕೊಡುವಾಗ ಶಾಮಿ ಹೇಳುತ್ತಿದ್ದದ್ದು ಇನ್ನೂ ನೆನಪಿದೆ. “ನೋಡ್ರಿ ಇಂಥದ್ದೆಲ್ಲ ಬರಿಬೇಕಾದರೆ ಕಾಲರ್ ಬಟನ್ ತೆಗೆದು ಬರಿಬೇಕು, ಮುದುಡಿಕೊಂಡು ಕೂತರೆ ಮೂರ್ ಅಕ್ಷರ ಹುಟ್ಟಲ್ಲ”

ಹೀಗೆ ಪದಗಳ ಜೊತೆ ಜೂಜಾಟ ಯಾರೂ ಊಹಿಸದ ಹೆಡ್ ಲೈನ್ ಕೊಡುವ ಮೂಲಕ ಹುಬ್ಬೇರಿಸುವಂತೆ ಮಾಡುತ್ತಿದ್ದ ‘ಗಾರುಡಿಗ’ ಎನ್ನಬಹುದು.

ಜೀವನ ಉತ್ಸಾಹಿ ಶಾಮಿ

ಶಾಮ್ ಸಾರ್ ಎಂದರೆ ಸೊಗಸು, ಸದಾ ಶೀತಮಾರುತಗಳ ಹೊಡೆತಕ್ಕೆ ಸಿಲುಕಿದ ಸೂಕ್ಷ್ಮ ಜೀವಿಯಂತೆ ಕಾಣುತ್ತಿದ್ದರು. ಪ್ರತಿದಿನ ಕೋಟು ಧರಿಸುತ್ತಿದ್ದರು ಎಂಬುದು ಉತ್ಪ್ರೇಕ್ಷೆಯಾದರೂ ನಿಜ. ನೆಗಡಿಯಾದ ಮೂಗಿನೊಡನೆ ಸೆಣಸಾಡುವ ಕರ್ಚೀಪು, ಆಗಾಗ ತಲೆ ಬಾಚಲು ಹಣಿಕೆ, ಪೆನ್, ಸುಕ್ಕು ಮೂಡದ ಶರ್ಟ್, (ಬಹುಶಃ ಕೊನೆಗಾಲದ ವರೆಗೂ ಪಿಎನ್ ರಾವ್ ಸಂಸ್ಥೆಯಿಂದಲೇ ತಮ್ಮ ಡ್ರೆಸ್ ಖರೀದಿಸುತ್ತಿದ್ದರು ಎಂದು ಕಾಣುತ್ತೆ.) ಪಾಲೀಷ್ ಮಾಡಿದ ಶೂ ಎಲ್ಲವೂ ಜನರ್ಲಿಸ್ಟ್ ಸ್ವರೂಪಕ್ಕಿಂತ ಕಂಪನಿ ಸಿಇಒ ಅಥವಾ ಬ್ರ್ಯಾಂಡ್ ಅಂಬಾಸಿಡರ್ ಎಂಬಂತೆ ಅವರನ್ನು ತೋರಿಸುತ್ತಿತ್ತು. ಅವರು ಕೂಡಾ ಕಾಯ, ವಾಚ, ಮನಸ ತಾವು ಕೆಲಸ ಮಾಡಿದ ಸಂಸ್ಥೆಗಳ ರಾಯಭಾರಿಯಾಗಿ ಸದಾ ಜೀವಿಸಿದ್ದರು.

ಟೀಂನಲ್ಲಿ ಯಾರಾದ್ರೂ ಚೆನ್ನಾಗಿ ಡ್ರೆಸ್ ಮಾಡ್ಕೊಂಡ್ ಬಂದಿದ್ದು ಕಂಡ್ರೆ ಏನ್ರಿ ವಿಶೇಷ ಇವತ್ತು, ಸಕತ್ತಾಗಿದೆ ಡ್ರೆಸ್ ಅಂತಾ ಇದ್ರು. ವಿಶೇಷ ಸಂದರ್ಭಗಳಲ್ಲಿ ತಪ್ಪದೇ ಪಂಚೆ, ಶಲ್ಯ ಅಥವಾ ಒಳ್ಳೆ ಕುರ್ತಾ ಧರಿಸಿ ಟ್ರಿಮ್ ಆಗಿ ಬಂದು ಬಿಡುತ್ತಿದ್ದರು.

ಶಾಮಿಗೆ ಸುದ್ದಿಮನೆ ಜೊತೆಗೆ ಅತ್ಯಂತ ಇಷ್ಟವಾದದ್ದು ಅಡುಗೆ ಮನೆ, ಶಾಮಿ ಮನೆಗೆ ಹೋದ್ರೆ ಕುರುಕಲು ತಿಂಡಿ, ಡ್ರೈ ಫ್ರೂಟ್ಸ್ ತಿನ್ನೋಕೆ ಸಿಗುತ್ತಿತ್ತು. ಏನಿಲ್ಲದಿದ್ದರೂ ತಿಳಿಸಾರು ಅನ್ನ, ಹಪ್ಪಳ ಮಾಡಿ ಬಡಿಸುತ್ತಿದ್ದರು. ಇನ್ನು ಕೆಲವೊಮ್ಮೆ ‘ಬನ್ರೀ ಏನು ತಿಳಿಸಾರು ಅನ್ನ ಇದ್ದಿದ್ದೇ’ ಎಂದು ಜಯನಗರ ಸೇರಿದಂತೆ ಸುತ್ತಾ ಮುತ್ತಾ ಇದ್ದ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು.

ಚುಂಗ್ ವಾ, ಜಾವಾ ಸಿಟಿ ಕೆಫೆ ಶಾಮಿ ಖಾಯಂ ಅಡ್ಡ ಆಗಿರುತ್ತಿತ್ತು. ಊಟಕ್ಕೆ ಮುಂಚೆ, ಊಟ ಆದ್ಮೇಲೆ ಸಿಗರೇಟ್ ಕಡ್ಡಾಯವಾಗಿರುತ್ತಿತ್ತು. ಇವರಿಗಾಗಿ ಜಾವಾ ಸಿಟಿ ಹುಡುಗರು ಕೆಪೆಚಿನೋ ಬಿಟ್ಟು ಅಸಲಿ ಫಿಲ್ಟರ್ ಕಾಫಿ ಮಾಡಿ ಕೊಡುತ್ತಿದ್ದರು. ಒಳ್ಳೆ ಕಾಫಿ ಜೊತೆ ನಮಗೆ ಸಾಕಷ್ಟು ವಿಷಯಗಳ ಚರ್ಚೆಗೆ ಕಾಲ ಸಿಗುತ್ತಿತ್ತು. ಕೆಲವೊಮ್ಮೆ ಆಫೀಸ್ ಟೈಮಲ್ಲೇ ಬೋರ್ ಹೊಡೆದಾಗ ಕೆಫೆಯಲ್ಲಿ ಬಂದು ಕೂತು ಬಿಡುತ್ತಿದ್ದರು. ಆದ್ರೆ ಕೈಯಲ್ಲಿರುವ ಮೊಬೈಲಲ್ಲಿ ಗೂಗಲ್ ಅನಾಲಿಟಿಕ್ಸ್ ಓಪನ್ ಮಾಡಿ ಯಾವ ಸ್ಟೋರಿ ಓಡ್ತಾ ಇದೆ ಯಾವ್ದು ಕುಸಿಯುತ್ತಿದೆ ಅನ್ನೋದು ನೋಡದೆ ಇರುತ್ತಿರಲಿಲ್ಲ.

ದಟ್ಸ್‌ಕನ್ನಡ, ಒನ್‌ಇಂಡಿಯಾದಲ್ಲಿ ಹಲವು ವರ್ಷಗಳ ಕಾಲ ಅಡುಗೆ ಮನೆ ಒಲೆ ಉರಿಯುವಂತೆ ನೋಡಿಕೊಂಡಿದ್ದರು. ಪ್ರತಿ ದಿನ ತಂಡದ ಸದಸ್ಯರೊಬ್ಬರು ಸೀಸನ್‌ಗೆ ತಕ್ಕಂತೆ ತಿಂಡಿ ತಿನಿಸು, ಸಾರು, ಕಷಾಯ, ಆರೋಗ್ಯ ಸಲಹೆಗಳನ್ನು ಓದುಗರ ಮುಂದಿಡಬೇಕಾಗಿತ್ತು. ನಂತರ ಇದೆಲ್ಲವೂ ಲೈಫ್ ಸ್ಟೈಲ್ ಪೋರ್ಟಲ್‌ಗೆ ವರ್ಗಾವಣೆಗೊಂಡು ಹಲವು ಲೇಖನಗಳು ಸಿಗದೆ ತಡಕಾಡಿದ್ದರು. ಊಟ ತಿಂಡಿ ಇಮೇಜ್ ಬಳಸುವಾಗ ಕಾಪಿರೈಟ್ ಬಗ್ಗೆ ಸದಾ ಜಾಗ್ರತೆ ವಹಿಸುತ್ತಿದ್ದರು.

ಓಜೆಗಳಿಗೆ ರಜೆ ಎಂಬ ಮರೀಚಿಕೆ

Online Journalists(OJ) ಅಂದರೆ ಆರಾಮ್ ಡೆಸ್ಕ್ ಜಾಬ್ ಸುಲಭವಾಗಿ ಮಾಡಿಕೊಂಡು ಹೋಗಬಹುದು ಯಾವಾಗ ಬೇಕಾದರೂ ರಜೆ ಸಿಗುತ್ತೆ ಎಂಬ ಮರೀಚಿಕೆ ಹಲವು ವರ್ಷಗಳ ಕಾಲ ಇತ್ತು, ಈಗಲೂ ಕೆಲವರಿಗೆ ಇರಬಹುದು. ಆದರೆ, ಇದು 24/7 ಕೆಲಸ, be like digital journalist ಅಂತಾ ಶಾಮಣ್ಣ ಹೇಳ್ತಾ ಇರ್ತಾ ಇದ್ರು, ಆದರೆ ಸುಲಭವಾಗಿ ಬೇಕಾದಾಗೆಲ್ಲ ರಜೆ ಕೊಡ್ತಾ ಇದ್ರು ಎಷ್ಟೋ ಸಲ ಐಟಿ ಕಂಪನಿ ರಜೆ ಚೀಟಿ ಕಟ್ಟು ಪಾಡು ಇಲ್ಲದೆ, ಬರೀ ಒಂದು ಎಸ್ ಎಂಎಸ್ ಅಥವಾ ಇಮೇಲ್ ಹಾಕಿ ಕೂಡಾ ರಜೆ ಪಡೆಯಬಹುದಾಗಿತ್ತು. ಹಿಂತಿರುಗಿದ ಮೇಲೆ ತಪ್ಪದೇ ಎಡಿಟರ್ ಶಾಮ್ ಅಥವಾ ಅಸೋಸಿಯೇಟ್ ಎಡಿಟರ್ ಪ್ರಸಾದ್ ಸಹಿ ಹಾಕಿಸಿಕೊಂಡು ಎಚ್ ಆರ್ ಗಳಿಗೆ ರಜೆ ಚೀಟಿ ಕಡ್ಡಾಯವಾಗಿ ಕೊಡಬೇಕಿತ್ತು ಅಷ್ಟೇ.

ಆದರೆ ಒಮ್ಮೆ ಮಾತ್ರ ಒಂದು ತಿಂಗಳ ಮಟ್ಟಿಗೆ ನಾನು ಜಯನಗರದ ಆಫೀಸ್ ಬಿಟ್ಟು ಎವೆರೆಸ್ಟ್ ಪಾದ ಮುಟ್ಟೋಕೆ ಹೋಗ್ಬಿಟ್ಟೆ. ಆದರೆ, ಹೋಗೋ ಹುರುಪಲ್ಲೋ, ಉಪೇಕ್ಷೆಯಿಂದಲೋ ಶಾಮಣ್ಣಗೆ ಬರೀ ಇಮೇಲ್ ಹಾಕಿ ಹೋಗಿದ್ದೆ, ಇಬಿಸಿ ಟ್ರೆಕ್ ಮುಗಿಸಿಕೊಂಡು ವಾಪಸ್ ಬರ್ಬೋದಿತ್ತು, ಆದರೆ, ಆಫೀಸ್ ಇಂದ ಯಾವುದೇ ರಿಪ್ಲೇ ಬಂದಿರಲಿಲ್ಲ, ಇರ್ಲಿ ಅಂಥಾ ಪೋಖರಾ ಕಡೆ ಹೋಗಿ ವಾಪಸ್ ಜಯನಗರ ಕಡೆಗೆ ಬರೋ ಅಷ್ಟರಲ್ಲಿ ಕಚೇರಿ ಈ ಮುಂಚೆಗಿಂತಲೂ ಶಾಂತವಾಗಿತ್ತು. ಅಪರೂಪಕ್ಕೆ ಶಾಮ್ ಕೂಡಾ ಸೈಲೆಂಟ್ ಮೋಡ್‌ನಲ್ಲಿದ್ರು, ಮೊದಲೇ ಮೂಡಿಯಾದ ಶಾಮಣ್ಣ ಆಗಾಗ ಅನ್ಯಮನಸ್ಕರಾಗಿ ಇದ್ದುಬಿಡುತ್ತಿದ್ದರು, ಇಲ್ಲವೇ ನಾನ್‌ಸ್ಟಾಪ್ ಮಾತಾಡುತ್ತಿದ್ದರು. ಆದರೆ, ಇದೊಂದು ಥರಾ ವಿಚಿತ್ರ ಮೌನ.

ಆಮೇಲೆ ಮೊದಲು ಎಚ್‌ಆರ್ ನಂತರ ಸಿಇಒ ಇಂದ ಕ್ಯಾಬೀನ್‌ಗೆ ಕರೆ, “ಸೀನಿಯರ್ ಅಲ್ವ ನೀವು ಯಾಕೆ ಮಹೇಶ್, ಯಾಕ್ ಹೀಗ್ ಮಾಡಿದ್ರಿ, ಶಾಮಣ್ಣ ತುಂಬಾ ಕೋಪ ಮಾಡ್ಕೊಂಡಿದ್ದಾರೆ, ಸದ್ಯಕ್ಕಂತೂ ನಿಮ್ಮೊಟ್ಟಿಗೆ ಮಾತಾಡಲ್ಲ, ಹೋಗುವಾಗ ಹೇಳೋದಲ್ವ, ರಜೆ ಸಿಗಲ್ಲ ಅಂತನಾ ಅಥವಾ ಯಾಕ್ ಹೇಳ್ಬೇಕು ಅಂತನಾ ಹೀಗೆ ಗಂಟೆ ತನಕ ಹಿತೋಪದೇಶವಾಯಿತು. ಸ್ವಲ್ಪ ಟೈಮ್ ಕೊಡಿ ಆಮೇಲೆ ಶಾಮ್ ಅವ್ರೆ ಬಂದು ಮಾತಾಡಿಸುತ್ತಾರೆ” ಅಂಥ ಹೇಳಿದ್ರು.

ಸುಮಾರು 20 ದಿನ ನನ್ನ, ಶಾಮ್ ನಡುವೆ ಮೌನ ಮುಂದುವರೆಯಿತು. ಪ್ರತಿದಿನ ಡೈಲಿ ಹಡಲ್ ಮುಗಿದ ಬಳಿಕ ಲ್ಯಾಪ್ ಟ್ಯಾಪ್ ಮುಂದೆ ಕೂತ 10 ನಿಮಿಷದಲ್ಲಿ ಎರಡು ಬಾರಿ, ಗುರು, ಮಲ್ನಾಡ್, ಸಿದ್ದು ಅಥವಾ ಪಕ್ಕದಲ್ಲೇ ಇದ್ದ ಪ್ರಸಾದ್ ಅಂತಾ ಕೂಗಿ ಏನಾದ್ರೂ ಕೇಳುತ್ತಿದ್ದ ಶಾಮ್ ಫುಲ್ ಸೈಲಂಟ್ ಆಗಿರೋದು ನೋಡಿದ್ದು ಅಂದೇ ಮೊದಲು. ಕೊನೆಗೂ ಯಾವುದೋ ತಾಂತ್ರಿಕ ಸಮಸ್ಯೆ ಎದುರಾದಾಗ, ರೀ ಬನ್ರಿ ಇಲ್ಲಿ ಇದೇನು ನೋಡಿ ಅಂದ್ರು, ಆಮೇಲೆ ಮೊದಲಿನಂತೆ ಮಾತಾಡತೊಡಗಿದ್ರು, ಆದರೆ ಪ್ರವಾಸದ ಬಗ್ಗೆ ಎಂದೂ ಏನೂ ಕೇಳಲಿಲ್ಲ. ನಾನು ಹೇಳಲಿಲ್ಲ, ಕೊನೆಗೆ ಬರೆಯಲೂ ಇಲ್ಲ.

ಪದಕೋಶ, ನುಡಿಗಟ್ಟು, ಗಾದೆ

‘ಎತ್ತು ಉಚ್ಚೆ ಹೋಯ್ದಂತೆ ಸುಮ್ನೆ ಇಷ್ಟುದ್ದಾ ಬರೀತಾ ಹೋಗ್ಬೇಡ್ರಿ’, ‘ಕತ್ತೆ ಥರಾ ಹೆಡ್‌ಲೈನ್ ಕೊಡ್ತಿರಾ’, ‘ಸಣ್ಣ ಸಣ್ಣ ವಾಕ್ಯದಲ್ಲಿ ಬರೀರಿ’, ‘ಮೊದಲು ನೀವು ಬರೆದಿದ್ದು ನಿಮಗೆ ಅರ್ಥ ಆಗಬೇಕು, ಅರ್ಥ ಆಗ್ತಿಲ್ಲ ಅಂದ್ರೆ ಮುಂದೆ ಬರಿಯೋಕೆ ಹೋಗ್ಬೇಡಿ’, ‘ಸ್ಟೋರಿಲಿ ನುಡಿಗಟ್ಟು, ಗಾದೆ, ಅಂಕಿ ಅಂಶ ಬಳಸಿ, ಸ್ಪೆಲ್ಲಿಂಗ್ ಮಿಸ್ಟೇಕ್ ದೊಡ್ಡ ಕ್ರೈಂ’ ಅನ್ನುತ್ತಿದ್ದರು. ಅವರು ಬರೆದ ಸ್ಟೋರಿಯಲ್ಲಿ ತಪ್ಪು ಕಂಡು ಬಂದಿದ್ದು ತೋರಿಸಿದರೆ, ತಪ್ಪದೇ ತಿದ್ದುಪಡಿ ಮಾಡ್ತಾ ಇದ್ರು, ‘ಪದ್ಯ, ಹಾಡು ಕೇಳೋಕೆ, ಗದ್ಯ ಬರೆಯೋಕೆ, ಓದೋಕೆ ಚೆನ್ನ ಅಂತಾ ಇದ್ರು’, ‘ಪ್ರತಿ ಸ್ಟೋರಿಗೂ ಎರಡು ಮುಖ ಇರುತ್ತೆ, ಅದನ್ನು ಅರ್ಥ ಮಾಡ್ಕೊಂಡು ಬರಿಬೇಕು, readers are more intelligent than you’ ಅಂತಾ ಇದ್ರು

ಏನ್ರೀ, ಇಷ್ಟುದ್ದಾ ಕಥೆ ಬರಿತೀರಾ, ನೀವು ಗಾರ್ಡಿಯನ್‌ಗೆ ಹೋಗ್ಬಿಡ್ರಿ ನಿಮ್ಗೆ ಅದೇ ಬೆಸ್ಟ್ ಅಂತಾ ನನಗೆ ಸಿಕ್ಕ ಸಿಹಿ ಬೈಗುಳ. ಏನ್ ಟೀಂ ರೀ ಪ್ರಸಾದ್, ಎರಡು ಲೈನ್ ಇಂಗ್ಲೀಷ್‌ನಲ್ಲಿ description ಬರಿಯೋಕೆ ಬರಲ್ಲ ಅಂತಿದ್ರು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಾದ ನಾವೆಲ್ಲ ಪಿಳಿಪಿಳಿ ಕಣ್ಬಿಟ್ಟು ಶಾಮಣ್ಣನ ಇಂಗ್ಲೀಷ್ ಜ್ಞಾನಕ್ಕೆ ತಲೆದೂಗ್ತಾ ಇದ್ವಿ.

ಸಪ್ನ ಬುಕ್ ಹೌಸ್‌ಗೆ ಹೋಗಿ ಕನ್ನಡ ರತ್ನಕೋಶ ಪುಸ್ತಕ ತಗೊಂಡು ಬಂದು, ಕಡ್ಡಾಯವಾಗಿ ಟೀಂನಲ್ಲಿದ್ದ ಎಲ್ಲರ ಡೆಸ್ಕ್‌ನಲ್ಲಿ ಸದಾ ಕಾಲ ಇರುವಂತೆ ಮಾಡಿದ್ರು.

‘ಮಲ್ನಾಡ್ ಬನ್ನಿ, ನೋಡಿ ಹೇಗಿದೆ ಈ ಟ್ವೀಟ್’ ಅಂತಾಯಿದ್ರು, ಅಪರೂಪಕ್ಕೆ ಒಮ್ಮೆ ನಾನು ಕೊಟ್ಟ ಸಲಹೆ ಸ್ವೀಕರಿಸಿ, ಸರ್ಚ್ ಕೀ ವರ್ಡ್ ಬದಲಾಯಿಸಿ, ಟ್ವೀಟ್ ಮಾಡಿ ಹೊರಗೆ ಹೋಗ್ತಾ ಇದ್ರು, ಸಿಗರೇಟ್ ಸೇದುತ್ತಾ ‘ಎನಿ ರಿಯಾಕ್ಷನ್’ ಅಂತಾ ಇದ್ರು, ಟ್ವೀಟ್ ಹಾಗೂ ಅದಕ್ಕೆ ಬರುವ ಪ್ರತಿಕ್ರಿಯೆ ಬಗ್ಗೆ ತೀವ್ರವಾದ ಹುಚ್ಚಿತ್ತು, ಫೇಸ್ಬುಕ್‌ಗಿಂತ ಟ್ವಿಟ್ಟರ್ ಬಗ್ಗೆ ಭಾರಿ ಒಲವು ಇಟ್ಟುಕೊಂಡಿದ್ರು, ಇದಲ್ಲದೆ, ಟೆಕ್ನಿಕಲ್ ಟೀಂ, ಎಸ್ ಇ ಒ ಟೀಂ ಹೊರ ತರುತ್ತಿದ್ದ ಸಿಎಂಎಸ್ ಅಪ್ಡೇಟ್, ಹೊಸ ಹೊಸ ಅನಾಲಿಟಿಕ್ಸ್ ಟೂಲ್ಸ್ ಎಲ್ಲವನ್ನು ತಿಳಿದುಕೊಳ್ತಾ ಇದ್ರು, ಕನ್ನಡ ಟೀಂ ಅಲ್ಲದೆ, ಪಕ್ಕದ ಮಲೆಯಾಳಂ, ಅಂದಿನ ದಟ್ಸ್‌ಕ್ರಿಕೆಟ್, ಬೆಂಗಾಲಿ, ಹಿಂದಿ, ತಮಿಳು ಟೀಂ ಸದಸ್ಯರಿಗೂ ಶಾಮಿ ಚಿರಪರಿಚಿತ.

ಯಾರಿಂದ ಬೇಕಾದರೂ ಸ್ಟೋರಿ ಬರೆಸಿ ಗೆಲ್ಲಿಸಬಲ್ಲ ಛಾತಿ ಅವರಲ್ಲಿತ್ತು. ಅನಿವಾಸಿ ಕನ್ನಡಿಗರ ಪಾಲಿಗೆ ಶಾಮಿ ಪ್ರಾತಃ ಸ್ಮರಣೀಯ ನಲ್ಮೆಯ ಗೆಳೆಯರಾಗಿ ಎಂದಿಗೂ ಇರುತ್ತಾರೆ. ಇದಲ್ಲದೇ ನಮ್ಮ ಕಚೇರಿಯಲ್ಲಿದ್ದ ಅಡ್ಮಿನ್, ಗ್ಯಾಲರಿ ವಿಭಾಗದವರು ಒನ್‌ಇಂಡಿಯಾದಲ್ಲಿ ಲೇಖನ ಬರೆದಿದ್ದಾರೆ. ಹಿಂದಿ, ತೆಲುಗು ಭಾಷೆಯಲ್ಲಿ ಒಳ್ಳೆ ಲೇಖನ ಇದ್ರೆ ಅದನ್ನು ಕನ್ನಡಕ್ಕೆ ಬರೆಸುತ್ತಿದ್ದರು. ಬ್ಲಾಗರ್‌ಗಳ ಕಾಲದಲ್ಲಿ ಹೊಸ ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು, ದಿನ ನಿತ್ಯ ಟಾಪ್ ಬ್ಲಾಗ್ಸ್ ಪಟ್ಟಿ ಮಾಡಿ ಶಾಮಿಗೆ ಕಳಿಸುವುದು ನನ್ನ ಕೆಲಸವಾಗಿತ್ತು.

ಇದೇ ರೀತಿ ಯಾವ ವಿಷಯ ಕೊಟ್ಟರೂ ಅದರ ಬಗ್ಗೆ ವಿವರವಾಗಿ ಮಾತಾಡುತ್ತಿದ್ದರು. ಹೀಗಾಗಿ, ಮುಂದೊಂದು ದಿನ ಸಂಥಿಂಗ್ ವಿಥ್ ಶಾಮ್ ಎಂಬ ಟಾಕ್ ಶೋ ಶುರುವಾಯ್ತು, ನಾನು, ರಾಘವೇಂದ್ರ ಸಿವಿ ತೆರೆ ಹಿಂದಿನ ಕೆಲಸ ನೋಡಿಕೊಂಡರೆ, ತಂಡದ ಸದಸ್ಯರಾದ ಗುರುರಾಜ್, ಶ್ರೀನಿವಾಸ ಮಠ, ಪ್ರಸಾದ್ ನಾಯಿಕ್, ಮಂಜು, ತೃಪ್ತಿ, ನಯನಾ  ಅಥವಾ ಯಾರ ಸ್ಟೋರಿ ಪಿಕ್ ಮಾಡಿರ್ತಾರೊ ಅವರು ಸ್ಕ್ರಿಪ್ಟ್ ಬರೆದುಕೊಡ್ಬೇಕಿತ್ತು. ಈ ಮೂಲಕ ಎಲ್ಲರಿಗೂ ಒಂದು ರೀತಿ ಸವಾಲಾಗಿತ್ತು. ಶಾಮಿಗೇನೋ ನಿರರ್ಗಳವಾಗಿ ಮಾತಾಡಿಬಿಡುತ್ತಿದ್ದರು.

ಏನ್ರೀ, ಒಂದು ಮೇಕಪ್ ಕಿಟ್ ಇಲ್ಲ, ತಲೆ ಕೂದಲು ಚೆಂದ ಮಾಡೋರು ಇಲ್ಲ, ಚೆನ್ನಾಗಿ ಕಾಣಿಸೋದು ಬೇಡ್ವ ಅಂತಾ ಇದ್ರು, ಒಂದು ಸಲ ಬಜೆಟ್ ಚರ್ಚೆ ಅಂತಾ ತಂಡದ ಸದಸ್ಯರನ್ನೇ ಕೂರಿಸಿಕೊಂಡು ಚರ್ಚೆ ಮಾಡಿದ್ರು, ಸೆಲೆಬ್ರಿಟಿಗಳನ್ನು ಕರೆಸಿದಾಗೆಲ್ಲ ಮಾತಾಡಲು ಶಾಮ್ ಇದ್ದರೆ ಸಾಕಿತ್ತು, ಚುನಾವಣೆ ಫಲಿತಾಂಶ ಲೈವ್, ದಸರಾ ಲೈವ್, ಪಿಯು ಫಲಿತಾಂಶ ಲೈವ್ ಹೀಗೆ ಹಲವು ಲೈವ್‌ಬ್ಲಾಗ್ ಮಾಡುವಾಗ ಶಾಮ್ ಕೊಡುತ್ತಿದ್ದ ಸಲಹೆ, ಟ್ವೀಟ್ಸ್ ಸಹಕಾರಿಯಾಗಿರುತ್ತಿತ್ತು.

ಡಿಜಿಟಲ್ ಪತ್ರಿಕಾರಂಗಕ್ಕೆ ನನ್ನ ಕರೆಸಿಕೊಂಡಿದ್ದ ಶಾಮ್

ಶಾಮ್ ಬಗ್ಗೆ ಬರೀತಾನೇ ಇರಬಹುದು, ಅಂದ ಹಾಗೆ, ನನ್ನನ್ನು ಶಾಮ್ ಬಳಿಗೆ ಕರೆ ತಂದಿದ್ದು, ಪತ್ರಕರ್ತ ಗೆಳೆಯ ಹ.ಚ ನಟೇಶ್ ಬಾಬು. ಸೋದರಿ ಸಮಾನರಾದ ಪತ್ರಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಅವರಿಂದ ಶಾಮಿ ಹೇಗೆ ಏನು ಎಂತಾ ಕೇಳಿ ತಿಳಿದಿದ್ದೆ, ಇನ್ನು ರವಿಕೃಷ್ಣಾ ರೆಡ್ಡಿ ಅವರ ಕನಸಿನ ಸುದ್ದಿತಾಣ ವಿಕ್ರಾಂತ ಕರ್ನಾಟಕ ವೆಬ್‌ತಾಣ ನಿರ್ಮಿಸುವಾಗ ನನಗೆ, ಗೆಳೆಯ ವೀರೇಶ್ ಹೊಗೆಸೊಪ್ಪಿನವರಿಗೆ ದಟ್ಸ್‌ಕನ್ನಡದ ಪ್ರಸಾದ್ ನಾಯಿಕ್ ನೆರವಾಗಿದ್ದರು.

ವಿಕ್ರಾಂತ ಕರ್ನಾಟಕ ತೊರೆದ ಮೇಲೆ ಫ್ರೀಲಾನ್ಸ್ ಮಾಡ್ಕೊಂಡು ಇರೋನಾ ಅಂತಿದ್ದ ನನಗೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ವರದಿ, ಚಿತ್ರಗಳನ್ನು ಕಳಿಸಿಕೊಡಿ, ಶಾಮ್‌ಗೆ ಇಷ್ಟವಾದರೆ, ಕೆಲ್ಸಕ್ಕೆ ಸೇರಿಸಿಕೊಳ್ಳಬಹುದು ಎಂದಿದ್ದರು ನಟೇಶ್. ಸಮ್ಮೇಳನ ಮುಗಿಯುವ ವೇಳೆಗೆ ಶಾಮಿ ಎಸ್ಕೆ ಇಂದ ಬಂದ ಒಂದು ಇಮೇಲ್ ನೋಡಿ ಥ್ರಿಲ್ ಆಗಿಬಿಟ್ಟಿದ್ದೆ. ದಟ್ಸ್ ಕನ್ನಡದಲ್ಲಿ ಒಂದು ಲೇಖನ ಬಂದರೆ ಸಾಕು ಎನ್ನುವ ಕಾಲದಲ್ಲಿ ಸಮ್ಮೇಳನದ ಬಗ್ಗೆ ನಾನು ಕಳಿಸಿದ ಚಿತ್ರ, ಮಾಹಿತಿ ನೋಡಿ ಹೊಗಳಿ ಎಸ್ಕೆ ಶಾಮ್ ಕಳಿಸಿದ್ದ ಒಂದು ಇಮೇಲ್ ನನ್ನ ಕಾರ್ಯಕ್ಷೇತ್ರ ಬದಲಿಸಿ, ಪತ್ರಿಕಾ ರಂಗಕ್ಕೆ ಕರೆ ತಂದಿತ್ತು.

ಅದಾದ ಮೇಲೆ ಎಲ್ಲರನ್ನು ಅವರು ಇಂಟರ್ ವ್ಯೂ ಮಾಡುವಂತೆ ನನ್ನನ್ನು ಇಂಟರ್ ವ್ಯೂ ಮಾಡಿದ್ರು, ‘ಸಿಗರೇಟ್ ಸೇದ್ತಿರಾ?’ ಎಂಬ ಮೊದಲ ಪ್ರಶ್ನೆಯೊಂದಿಗೆ ಆರಂಭ. ಇಲ್ಲಾ ಸಾರ್ ಎಂದು ಹೇಳಿದೆ. ‘ಒಳ್ಳೆ ಅಭ್ಯಾಸ ಏನು ಇಲ್ವೇನ್ರಿ, ಹೇಗ್ ಇರ್ತಿರಾ ಈ ಫೀಲ್ಡಲ್ಲಿ’ ಅಂತ ಅಂದ್ರು. ‘ಆಮೇಲೆ ನಿಮ್ ಹಳೆ ಕಂಪನಿಯಲ್ಲಿ ಇದ್ದಂಗೆ ಇಲ್ಲಿ ಎರಡು ದಿನ ರಜೆ ಸಿಗಲ್ಲ ಕಣ್ರಿ’ ಅಂತಾ ಹೇಳಿ ನಕ್ಕಿದ್ರು, ಎಚ್‌ಆರ್ ಎದುರಿಗೆ ಸಿಕ್ಕಾಗ, ನ್ಯೂ ಜಾಯ್ನಿ ಮಹೇಶ್ ಮಲ್ನಾಡ್ ಅಂತಾ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಏನೇನೋ ಓದ್ಕೊಂಡಿದ್ದಾರೆ ಅಂತಾ ಪರಿಚಯ ಮಾಡಿಕೊಟ್ರು. ಮುಂದೆ ಕನ್ನಡ ತಂಡಕ್ಕೆ ಯಾರಾದ್ರೂ ಹೊಸಬರು ಸೇರಿದರೆ ಅವರಿಗೆ ತರಬೇತಿ, ತಾಂತ್ರಿಕ ನೆರವು ನೀಡುವ ಕಾಯಕ ಕೊನೆ ತನಕ ನನಗೆ ಅಘೋಷಿತವಾಗಿ ನೀಡಿದ್ದರು.

ಮುಂದೆ ಚಿತ್ರದುರ್ಗ ಸಮ್ಮೇಳನಕ್ಕೆ ಹೋಗುವಾಗ. ನೋಡಿ ಮಲ್ನಾಡ್, ಸಮ್ಮೇಳನದ ವರದಿ, ಭಾಷಣ, ಅವ್ಯವಸ್ಥೆ ಅದು ಇದು ಬರೀತೀನಿ ಅಂತಾ ಇದ್ರೆ ಎಂಜಾಯ್ ಮಾಡೋಕೆ ಆಗಲ್ಲ, ಎಂಜಾಯ್ ಮಾಡ್ಕೊಂಡು ಮುಖ್ಯ ವರದಿ ಕಳಿಸಿ ಅಂತಾ ಪೇಯ್ಡ್ ಹಾಲಿಡೇ ಕೊಟ್ಟಿದ್ದೀನಿ ಅಂತಾ ಕಳಿಸಿಕೊಟ್ಟಿದ್ರು, ಜೊತೆಗೆ ದುರ್ಗದಲ್ಲಿ ಯಾವ ಕೆಫೆ ಸ್ಟೋರಿ ಮಾಡಬೇಕು, ಕೋಟೆಯಲ್ಲಿ ಎಲ್ಲೆಲ್ಲಿ ಕೆಮೆರಾ ಇಟ್ಟರೆ ಚೆನ್ನ ಅಂತಾ ಹೇಳಿ ಕಳಿಸಿದ್ರು, ಅಂದು ದುರ್ಗದ ಕೋಟೆಯಲ್ಲಿ ಹಾರುತ್ತಿದ್ದ ಕನ್ನಡ ಬಾವುಟ ಇರುವ ಚಿತ್ರ ಈಗಲೂ ಗೂಗಲ್ ಸರ್ಚ್‌ನಲ್ಲಿ ಆಗಾಗ ಕಾಣಿಸಿಕೊಂಡು ಸದ್ಬಳಕೆಯಾಗುತ್ತಿದೆ.

ಶಾಮಿಯಿಂದ ಬದುಕಿಗೊಂದು ಉದ್ಯೋಗ, ಜೀವನೋತ್ಸಾಹ, ಸಾಕಷ್ಟು ನೆನಪು ಸಿಕ್ಕಿದೆ. ಸಹದ್ಯೋಗಿಗಳಾಗಿದ್ದು ಗೆಳೆಯ, ಗೆಳತಿಯರ ಪಟ್ಟಿ ಸೇರಿದವರು ಹಲವಾರು ಮಂದಿ. ಒನ್‌ಇಂಡಿಯಾದಲ್ಲಿ ಇರುವ ತನಕ ದಿನ ನಿತ್ಯ ನಿರಂತರ ಕಾಲ್, ಚಾಟ್ ಸಂವಹನದಲ್ಲಿದ್ದರು. ಕೆಲವೊಮ್ಮೆ ಯಾರಿಗೂ ಹೇಳದಂತೆ ಮಾಯವಾಗುತ್ತಿದ್ದರು, ಇಮೇಲ್ ಐಡಿ ಪಾಸ್ವರ್ಡ್ ಕೊಟ್ಟು ಆಗಾಗ ಚೆಕ್ ಮಾಡುತ್ತಿರಿ, ಇಂಥವರ ಇಮೇಲ್ ಬರುವ ನಿರೀಕ್ಷೆಯಿದೆ, ಮೀಟ್ ಯೂ ಸೂನ್ ಎಂದಷ್ಟೇ ಹೇಳಿ ಹೋಗುತ್ತಿದ್ದರು. ಈ ಗೌಪ್ಯತೆ ಕಾಯುವುದು ಒಂಥರಾ ಥ್ರಿಲ್ ಕೊಡುತ್ತಿತ್ತು. ಆದರೆ, ಅವರಿಲ್ಲದೇ ಕಾಡುತ್ತಿತ್ತು ಅದೇ ನಿಗೂಢ ಮೌನ, ಮೊನ್ನೆ ಉಸಿರು ಚೆಲ್ಲಿ ಮಲಗಿದ್ದಾಗ, ನಾವು ನೋಡಿದ ಲವಲವಿಕೆಯ ಶಾಮಿ ಇಲ್ಲಿಲ್ಲ ಎಂಬ ಮೌನ ಆವರಿಸಿತ್ತು. ಶಾಮಣ್ಣ ಬಗ್ಗೆ ಬರೆಯ ತೊಡಗಿದರೆ ನಮ್ಮ ವೃತ್ತಿ ಬದುಕಿನ ಅವಲೋಕನ ಮಾಡಿದಂತೆ ಆಗುತ್ತದೆ. Tq, miss u Sham Sir

-Mahesh Malnad

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

4 thoughts on “In Memory of S.K Shama Sundara: Pioneer in Kannada Digital Journalism | ಡಿಜಿಟಲ್ ಪತ್ರಿಕಾರಂಗದ ಆದ್ಯಪ್ರವರ್ತಕ ಎಸ್ಕೆ ಶಾಮಸುಂದರ

  1. ಸೊಗಸಾದ ವ್ಯಕ್ತಿ ಚಿತ್ರ ಈ ಒಡನಾಟಿಯ ಒಡಲು ಸದಾ ಅಚ್ಚರಿಯ ಕಡಲು

  2. ಗುರುವಿಗೆ ಪ್ರೀತಿಯ ನುಡಿ‌ನಮನ. ಶಾಮ ಅವರ ವ್ಯಕ್ತಿತ್ವದ ಪರಿಚಯ ಚೆನ್ನಾಗಿದೆ.

Leave a Reply to Malenadiga Cancel reply

Your email address will not be published. Required fields are marked *